ಅಶ್ಫಾಕುಲ್ಲಾ ಖಾನ್ - ರಾಮ್ ಪ್ರಸಾದ್ ಬಿಸ್ಮಿಲ್ಲಾ ದೇಶಕ್ಕೆ ಮಾದರಿ: ಜಗನ್ನಾಥ ಎಸ್ ಎಚ್

ಕಲಬುರಗಿ: ಕ್ರಾಂತಿಕಾರಿಗಳಾದ ಅಶ್ಫಾಕುಲ್ಲಾ ಖಾನ್ ಮತ್ತು ರಾಮ್ ಪ್ರಸಾದ್ ಬಿಸ್ಮಿಲ್ಲಾ ಅವರ ಐಕ್ಯತೆಯ ಸಂಕೇತ ದೇಶಕ್ಕೆ ಮಾದರಿ ಎಂದು ಎಐಡಿವೈಒ ಜಿಲ್ಲಾ ಅಧ್ಯಕ್ಷರಾದ ಜಗನ್ನಾಥ .ಎಸ್. ಎಚ್ ಹೇಳಿದರು.
ಅವರು ಶಹಾಬಾದ ನಗರದ ಬಸವೇಶ್ವರ ವೃತ್ತದಲ್ಲಿ ಎಐಡಿವೈಒ ಹಮ್ಮಿಕೊಂಡ ರಾಮ್ ಪ್ರಸಾದ್ ಬಿಸ್ಮಿಲ್ಲಾ ಹಾಗೂ ಅಶ್ಫಾಕುಲ್ಲಾ ಖಾನ್ ಅವರ 97 ನೇ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬ್ರಿಟಿಷ್ ಸರ್ಕಾರದ 'ಒಡೆದು ಆಳುವ' ನೀತಿಯ ಸಂದರ್ಭ ಒಬ್ಬ ಹಿಂದೂ ಮತ್ತು ಒಬ್ಬ ಮುಸ್ಲಿಂ ಹುಡುಗನ ನಡುವಿನ ಸ್ನೇಹ, ಆ ಕಾಲದಲ್ಲಿ ಅದ್ವಿತೀಯವಾದುದು. ಅವರ ಗುಣನಡತೆಯಲ್ಲಿ ಕ್ರಾಂತಿಕಾರಿ ನೈತಿಕತೆ ಮತ್ತು ಸಿದ್ಧಾಂತದ ಪ್ರಭಾವ ಎಷ್ಟಿತ್ತೆಂದರೆ, ಭಾಷೆ ಅಥವಾ ಧರ್ಮದ ಪ್ರಶ್ನೆಗಳು ಬದಿಗೆ ಸರಿದಿದ್ದವು ಎಂದು ಜಗನ್ನಾಥ ಹೇಳಿದರು.
ಕಾರ್ಯದರ್ಶಿ ರಮೇಶ ದೇವಕರ್ ಮಾತನಾಡಿ, ಸರ್ಕಾರಗಳು ಜನರನ್ನು ಜಾತಿ, ಭಾಷೆ, ಧರ್ಮದ ಹೆಸರಿನಲ್ಲಿ ಒಡೆಯಲು ಪ್ರಯತ್ನಿಸುತ್ತಾರೆ. ಇಂತಹ ಸಮಯದಲ್ಲಿ ಇಬ್ಬರ ಮಹಾನ್ ಚೇತನಗಳ ಜೀವನವು ಐಕ್ಯತೆಯ ನಿದರ್ಶನವಾಗಿದೆ. ಇಂದಿನ ಜ್ವಲಂತ ಸಮಸ್ಯೆಗಳಾದ ನಿರುದ್ಯೋಗ, ಬೆಲೆ ಏರಿಕೆ,ಭ್ರಷ್ಟಾಚಾರ, ಮಹಿಳಾ ದೌರ್ಜನ್ಯದ ವಿರುದ್ಧ, ಸಂಘಟಿತ ಹೋರಾಟ ಕಟ್ಟಬೇಕೆಂದು ಹೇಳಿದರು.
ಕಿರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ಸಿದ್ದು ಚಂದ್ರಿ, ಅದ್ಯಕ್ಷರಾದ ರಘು ಪವಾರ, ದೇವರಾಜ ಮಿರಾಕಲ್ , ಆನಂದ, ಶಾಮ್, ರಾಕೇಶ್, ಹಾಗೂ ಇನ್ನಿತರ ಯುವಜನರು ಭಾಗವಹಿಸಿದರು.







