ಜೈ ಕನ್ನಡಿಗರ ಸೇನೆಯಿಂದ ಸಾಧಕರಿಗೆ ‘ಕನ್ನಡ ರತ್ನ’ ಪ್ರಶಸ್ತಿ ಪ್ರದಾನ

ಕಲಬುರಗಿ: ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಜೈ ಕನ್ನಡಿಗರ ಸೇನೆಯ ವತಿಯಿಂದ 71ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರ ಧರ್ಮಪತ್ನಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಹೋರಾಟಗಾರ ಲಕ್ಷ್ಮಣ ದಸ್ತಿ, ಕನ್ನಡಿಗರು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಸಾಕಷ್ಟು ಹೋರಾಟ ನಡೆಸುತ್ತಿದ್ದಾರೆ. ಹೋರಾಟಗಾರರ ಶ್ರಮ ಅಪಾರವಾಗಿದೆ. ಪ್ರತಿನಿತ್ಯ ನಗರವನ್ನು ಸ್ವಚ್ಛಗೊಳಿಸುವ ಮೂಲಕ ಸಾರ್ವಜನಿಕರ ಆರೋಗ್ಯ ಕಾಪಾಡುವ ಸ್ವಚ್ಛತಾ ಕಾರ್ಮಿಕರನ್ನು ಗುರುತಿಸಿ ಸನ್ಮಾನಿಸುವುದು ಉತ್ತಮ ಕಾರ್ಯವಾಗಿದೆ ಎಂದರು.
ಸೇನೆಯ ಸಂಸ್ಥಾಪಕ ಅಧ್ಯಕ್ಷ ಡಾ. ದತ್ತು ಭಾಸಗಿ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಈ ಬಾರಿಯ ರಾಜ್ಯೋತ್ಸವದಲ್ಲಿ ತಾಯಂದಿರಿಗೆ ಸೀರೆ ವಿತರಿಸುವ ಮೂಲಕ ಸಂಘಟನೆಗೆ ಅವರ ಆಶೀರ್ವಾದ ಸದಾ ಇರಲಿ ಎಂದು ಪ್ರಾರ್ಥಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ‘ಕನ್ನಡ ರತ್ನ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಫಾರುಕ್ ಅಹ್ಮದ್ ಮಣೂರ, ಡಾ. ಶರಣಬಸಪ್ಪ ಕಾಮರೆಡ್ಡಿ, ಡಾ. ವಿಕ್ರಮ್ ಸಿದ್ದಾರೆಡ್ಡಿ, ಡಾ. ಸಲ್ಮಾನ್ ಪಟೇಲ್, ಕೈಲಾಸ್ ಬನಾಳೆ, ಮಂಜುನಾಥ ಧೋಶೆಟ್ಟಿ ಹಾಗೂ ಪ್ರಶಾಂತ ಮಾಲಿ; ಶಿಕ್ಷಣ ಕ್ಷೇತ್ರದಲ್ಲಿ ಎಂ.ಇ. ಸಿದ್ದಿಕಿ, ಕುಮಾರಸ್ವಾಮಿ ಹಿರೇಮಠ; ಮಾಧ್ಯಮ ಕ್ಷೇತ್ರದಲ್ಲಿ ಶರಣಗೌಡ ಪಾಟೀಲ, ಗೋಕುಲ್ ಪಟೇಲ್, ಸಂತೋಷ ನಾಡಗಿರಿ, ಅಜೀಜುಲ್ಲಾ ಸರಮಸ್ತ್ ಹಾಗೂ ಎಸ್.ಬಿ. ಜೋಶಿ; ಸರ್ಕಾರಿ ಸೇವೆಯಲ್ಲಿ ಡಾ. ಸುರೇಶ ಎಲ್. ಶರ್ಮಾ; ಸಮಾಜ ಸೇವೆಯಲ್ಲಿ ಅಶೋಕ ಎಂ. ಕಾಳೆ; ಕೃಷಿ ವಿಜ್ಞಾನ ಕ್ಷೇತ್ರದಲ್ಲಿ ಡಾ. ಆನಂದ ನಾಯಕ್; ಹೋರಾಟ ಕ್ಷೇತ್ರದಲ್ಲಿ ಶರಣಬಸಪ್ಪ ಮಮಶೆಟ್ಟಿ ಹಾಗೂ ಚಂದ್ರಶೇಖರ ಪಾಟೀಲ, ಜಾನಪದ ಕ್ಷೇತ್ರದಲ್ಲಿ ವಿಶ್ವನಾಥ ತೋಟ್ನಳ್ಳಿ ಸೇರಿದಂತೆ ಹಲವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.






