ವೆನಿಸ್‌ನ ಅಂತರರಾಷ್ಟ್ರೀಯ ಕಲಾ ಕಾರ್ಯಾಗಾರಕ್ಕೆ ಕಲಬುರಗಿಯ ಅಯಾಜೋದ್ದೀನ್ ಪಟೇಲ್‌ಗೆ ಆಹ್ವಾನ

ಕಲಬುರಗಿ: ಕಲಬುರಗಿಯ ಅಂತರರಾಷ್ಟ್ರೀಯ ಖ್ಯಾತಿಯ ಕಲಾವಿದ ಹಾಗೂ ಛಾಯಾಗ್ರಾಹಕ ಮೊಹಮ್ಮದ್ ಅಯಾಜೋದ್ದೀನ್ ಪಟೇಲ್ ಅವರನ್ನು ಇಟಲಿಯ ವೆನಿಸ್‌ನಲ್ಲಿ ಸೆ.17ರಿಂದ 20ರವರೆಗೆ ನಡೆಯಲಿರುವ ಅಂತರರಾಷ್ಟ್ರೀಯ ಸಹಯೋಗದ ಕಲಾ ಪ್ರದರ್ಶನ ಹಾಗೂ ಶಿಲ್ಪಕಲಾ ಕಾರ್ಯಾಗಾರದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ.
ಎಸ್‌ಎಂಡಿ ಫೌಂಡೇಶನ್ ಹಾಗೂ ಹೆಚ್.ಯು. ವೆನೆಜಿಯಾ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ವೆನಿಸ್‌ನ ಹೆಚ್.ಯು. ವೆನೆಜಿಯಾ ಕ್ಯಾಂಪಿಂಗ್ ಇನ್ ಟೌನ್‌ನಲ್ಲಿ ‘ಆರ್ಟ್ ಬಿಯಾಂಡ್ ಬಾರ್ಡರ್ಸ್: ಭಾರತ ಮತ್ತು ಇಟಲಿ ನಡುವಿನ ಸೃಜನಶೀಲ ಸಂವಾದ’ ಎಂಬ ವಿಶೇಷ ಮೂರು ದಿನಗಳ ಕಾರ್ಯಾಗಾರ ಆಯೋಜಿಸಲಾಗಿದೆ.
ಕರ್ನಾಟಕ, ಅಸ್ಸಾಂ, ಕೋಲ್ಕತ್ತಾ, ಮುಂಬೈ, ದೆಹಲಿ, ಮಧ್ಯಪ್ರದೇಶ ಹಾಗೂ ಬರೋಡಾ ಸೇರಿದಂತೆ ದೇಶದ ವಿವಿಧ ಭಾಗಗಳ 11 ಮಂದಿ ಗಣ್ಯ ಕಲಾವಿದರು ಹಾಗೂ ಪ್ರಮುಖ ಯುರೋಪಿಯನ್ ಕಲಾವಿದರು ಈ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ. ಕಲಬುರಗಿಯ ಖ್ಯಾತ ಕಲಾವಿದ ಮೊಹಮ್ಮದ್ ಅಯಾಜೋದ್ದೀನ್ ಪಟೇಲ್ ಕೂಡ ಪ್ರಮುಖ ಕಲಾವಿದರಾಗಿ ಪಾಲ್ಗೊಳ್ಳಲಿದ್ದಾರೆ.
ಭಾರತೀಯ ಹಾಗೂ ಯುರೋಪಿಯನ್ ಕಲಾ ಸಮುದಾಯಗಳ ನಡುವೆ ಬಾಂಧವ್ಯ ಬೆಳೆಸುವ ಉದ್ದೇಶದಿಂದ ಕಾರ್ಯಾಗಾರ ಆಯೋಜಿಸಲಾಗಿದ್ದು, ವೈವಿಧ್ಯಮಯ ಕಲಾತ್ಮಕ ದೃಷ್ಟಿಕೋನಗಳ ಕುರಿತು ಸಂವಾದ, ಸಹಯೋಗದ ಸಭೆಗಳು ಹಾಗೂ ಮುಕ್ತ ಚರ್ಚೆಗಳು ನಡೆಯಲಿವೆ. ಸೃಜನಶೀಲತೆ, ಸ್ನೇಹ ಹಾಗೂ ಅರ್ಥಪೂರ್ಣ ಸಾಂಸ್ಕೃತಿಕ ವಿನಿಮಯದ ಸಂಬಂಧಗಳನ್ನು ಬಲಪಡಿಸುವುದು ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದೆ.
15 ದಿನಗಳ ಯುರೋಪ್ ಅಧ್ಯಯನ ಪ್ರವಾಸ :
ವೆನಿಸ್‌ನ ಮೂರು ದಿನಗಳ ಕಾರ್ಯಾಗಾರದೊಂದಿಗೆ ನಿಯೋಗವು ಸೆ.9ರಿಂದ 23ರವರೆಗೆ ಫ್ರಾನ್ಸ್, ಜರ್ಮನಿ, ನೆದರ್‌ಲ್ಯಾಂಡ್ಸ್, ಬೆಲ್ಜಿಯಂ, ಸ್ವಿಜರ್ಲ್ಯಾಂಡ್, ಇಟಲಿಯ ಫ್ಲಾರೆನ್ಸ್ ಹಾಗೂ ವ್ಯಾಟಿಕನ್ ಸಿಟಿ ಸೇರಿದಂತೆ ಯುರೋಪ್‌ನ ಪ್ರಮುಖ ಸಾಂಸ್ಕೃತಿಕ ನಗರಗಳಲ್ಲಿ 15 ದಿನಗಳ ಅಧ್ಯಯನ ಪ್ರವಾಸ ಕೈಗೊಳ್ಳಲಿದೆ.
ಈ ಸಂದರ್ಭದಲ್ಲಿ ವಿಶ್ವಪ್ರಸಿದ್ಧ ವಸ್ತುಸಂಗ್ರಹಾಲಯಗಳು, ಐತಿಹಾಸಿಕ ಸ್ಮಾರಕಗಳು ಹಾಗೂ ಕಲಾ ಗ್ಯಾಲರಿಗಳಿಗೆ ಭೇಟಿ ನೀಡಲಾಗುವುದು. ಲಿಯೊನಾರ್ಡೊ ಡಾ ವಿನ್ಸಿ, ಮೈಕೆಲ್ಯಾಂಜೆಲೊ, ವಿನ್ಸೆಂಟ್ ವ್ಯಾನ್ ಗಾಗ್, ರೆಂಬ್ರಾಂಡ್ ಹಾಗೂ ಪಿಕಾಸೊ ಅವರಂತಹ ವಿಶ್ವವಿಖ್ಯಾತ ಕಲಾವಿದರ ಶ್ರೇಷ್ಠ ಕಲಾಕೃತಿಗಳನ್ನು ನೇರವಾಗಿ ವೀಕ್ಷಿಸುವ ಅವಕಾಶ ಕಲಾವಿದರಿಗೆ ದೊರೆಯಲಿದೆ.
ಅಯಾಜೋದ್ದೀನ್ ಪಟೇಲ್ ಅವರು ದಖನ್ ರಾಜವಂಶಗಳ ಕಲೆ, ವಾಸ್ತುಶಿಲ್ಪ ಹಾಗೂ ಇತಿಹಾಸಕ್ಕೆ ಸಂಬಂಧಿಸಿದ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. 2014ರಲ್ಲಿ ರಾಷ್ಟ್ರೀಯ ಲಲಿತಕಲಾ ಪ್ರಶಸ್ತಿ, 2016–17ರಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯದ ಸಿಸಿಆರ್‌ಟಿ ರಾಷ್ಟ್ರೀಯ ಫೆಲೋಶಿಪ್ ಹಾಗೂ 2018ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ಹಿರಿಯ ಫೆಲೋಶಿಪ್ ಸೇರಿದಂತೆ ಹಲವು ಪ್ರಶಸ್ತಿ ಹಾಗೂ ಗೌರವಗಳನ್ನು ಅವರು ಪಡೆದಿದ್ದಾರೆ. ಅಲ್ಲದೆ, ತಮ್ಮದೇ ಆದ ಕಲಾ ಗ್ಯಾಲರಿ, ವಸ್ತುಸಂಗ್ರಹಾಲಯ ಹಾಗೂ ಸಂಶೋಧನಾ ಕೇಂದ್ರವನ್ನೂ ಸ್ಥಾಪಿಸಿದ್ದಾರೆ.
ಅವರು ಈ ಹಿಂದೆ ಅಮೆರಿಕ ಸಂಯುಕ್ತ ಸಂಸ್ಥಾನ, ಲಂಡನ್, ರಷ್ಯಾ, ಟರ್ಕಿ, ಚೀನಾ, ಕೀನ್ಯಾ, ಹಾಂಗ್‌ಕಾಂಗ್, ಮಕಾವು, ಈಜಿಪ್ಟ್, ಜೋರ್ಡಾನ್, ಉಜ್ಬೇಕಿಸ್ತಾನ್, ಕಝಾಕಿಸ್ತಾನ್, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಭೂತಾನ್ ಸೇರಿದಂತೆ ಹಲವು ದೇಶಗಳಿಗೆ ಭೇಟಿ ನೀಡಿ ಅಲ್ಲಿನ ಕಲೆ, ಸಂಸ್ಕೃತಿ ಮತ್ತು ಐತಿಹಾಸಿಕ ಪರಂಪರೆಯನ್ನು ಅಧ್ಯಯನ ಮಾಡಿದ್ದಾರೆ.
ಅವರ ಕಲಾವಿದ ಸ್ನೇಹಿತರಾದ ರಾಜಶೇಖರ್ ಶಮನ್ನಾ, ಟಿ. ದೇವೇಂದ್ರ, ರೆಹಮಾನ್ ಪಟೇಲ್ ಹಾಗೂ ನಾರಾಯಣ ಜೋಶಿ ಸೇರಿದಂತೆ ಹಲವರು ಅಯಾಜೋದ್ದೀನ್ ಪಟೇಲ್ ಅವರ ಯಶಸ್ವಿ ಕಲಾ ಪಯಣಕ್ಕೆ ಶುಭ ಹಾರೈಸಿದ್ದಾರೆ.






