ಕಲಬುರಗಿಯಲ್ಲಿ ಅಂಬೇಡ್ಕರ್ ವಿಚಾರಗಳ ಬಿತ್ತಿಸಿದವರು ಬಿ.ಶ್ಯಾಮಸುಂದರ್ : ಶಾಂತಪ್ಪ ಸೂರನ್

ಕಲಬುರಗಿ: “ಕಲಬುರಗಿ ಭಾಗದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಜನರಿಗೆ ಪರಿಚಯಿಸಿದ ಪ್ರಮುಖ ವ್ಯಕ್ತಿ ಬಿ.ಶ್ಯಾಮಸುಂದರ್ ಅವರಾಗಿದ್ದಾರೆ ಎಂದು ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಶಾಂತಪ್ಪ ಸೂರನ್ ಹೇಳಿದರು.
ನಗರದ ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿಯ ಡಾ.ಅಂಬೇಡ್ಕರ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಆಯೋಜಿಸಿದ್ದ ಡಾ.ಅಂಬೇಡ್ಕರ್ ವಿಚಾರ ವೇದಿಕೆಯ ಸಮಾರೋಪ ಸಮಾರಂಭ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ಯಾಮಸುಂದರ್ ಅವರು ಮೂಲತಃ ಔರಂಗಾಬಾದ್‌ನವರಾಗಿದ್ದು, ನಂತರ ಹೈದರಾಬಾದ್‌ನಲ್ಲಿ ನೆಲೆಸಿ ನಿಜಾಮ ಸಂಸ್ಥಾನದಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು. ಭೀಮಸೇನೆಯನ್ನು ಕಟ್ಟುವ ಮೂಲಕ ಅಂಬೇಡ್ಕರ್ ಅವರ ಚಿಂತನೆಗಳನ್ನು ಜನಮಾನಸಕ್ಕೆ ತಲುಪಿಸಿದರು. ನಾವು ಅವರ ಭಾಷಣಗಳನ್ನು ಕೇಳುತ್ತಾ ಅಂಬೇಡ್ಕರ್ ಅವರನ್ನು ಅರಿತುಕೊಂಡೆವು. ಇಂದಿನ ವಿದ್ಯಾರ್ಥಿಗಳು ಡಾ.ಅಂಬೇಡ್ಕರ್ ಕಾಲೇಜಿನ ಮೂಲಕ ಬಾಬಾ ಸಾಹೇಬರ ಆದರ್ಶಗಳನ್ನು ತಿಳಿದುಕೊಳ್ಳಬೇಕು” ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಅಭಿಯಂತರ ಮಲ್ಲಿಕಾರ್ಜುನ ಬಳತೆ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೆ.ಪಿ.ಇ ಸಂಸ್ಥೆಯ ಆಡಳಿತಾಧಿಕಾರಿ ಡಾ. ಚಂದ್ರಶೇಖರ ಶೀಲವಂತ ಮಾತನಾಡಿ, “ಇಂದು ಜಗತ್ತಿನಾದ್ಯಂತ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ವಿಚಾರಗಳ ಕುರಿತು ಅಧ್ಯಯನಗಳು ನಡೆಯುತ್ತಿವೆ. ನೂರಕ್ಕೂ ಹೆಚ್ಚು ದೇಶಗಳಲ್ಲಿ ಅವರ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಇದು ಅಂಬೇಡ್ಕರ್ ಅವರ ವ್ಯಕ್ತಿತ್ವದ ಮಹತ್ವವನ್ನು ತೋರಿಸುತ್ತದೆ. ಇಂದಿನ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಅವರ ಜೀವನವೇ ಪ್ರೇರಣೆಯಾಗಬೇಕು” ಎಂದು ಹೇಳಿದರು.
ಕಾಲೇಜಿನ ಚರಿತ್ರೆ ವಿಭಾಗದ ಪ್ರಾಧ್ಯಾಪಕರು ಹಾಗೂ ಡಾ. ಅಂಬೇಡ್ಕರ್ ವಿಚಾರ ವೇದಿಕೆಯ ಸಂಚಾಲಕರಾದ ಡಾ.ಗಾಂಧೀಜಿ ಮೊಳೆಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕನ್ನಡ ವಿಭಾಗದ ಡಾ. ವಸಂತ ವಿ. ನಾಶಿ ಕಾರ್ಯಕ್ರಮ ನಿರೂಪಿಸಿದರು. ಐಕ್ಯುಎಸಿ ನಿರ್ದೇಶಕರಾದ ಡಾ. ಸಿದ್ದಾರ್ಥ ಮದನಕರ್, ಕಾಲೇಜಿನ ಪ್ರಾಂಶುಪಾಲರಾದ ಡಾ. ಸಿದ್ದಪ್ಪ ಎಸ್. ಕಾಂತ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆಯ ಬಳಿಕ ಕಲಬುರಗಿ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 15 ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಷಣ, ಚರ್ಚೆ, ಪ್ರಬಂಧ ಹಾಗೂ ಅಂಬೇಡ್ಕರ್ ಪರ ಗೀತೆಗಳ ಸ್ಪರ್ಧೆಗಳಲ್ಲಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ. ಡಿ. ವಿಜಯಕುಮಾರ್, ಡಾ. ನಿರ್ಮಲಾ ಸಿರಗಾಪುರ, ಡಾ. ಅರುಣ್ ಜೋಳದಕೂಡ್ಲಿಗಿ, ಡಾ. ಶಿವಕುಮಾರ್, ಡಾ. ದತ್ತೂರಾಯ, ಡಾ. ಹರ್ಷವರ್ಧನ್, ಡಾ. ಕರಿಬಸಪ್ಪ, ಡಾ. ಅರುಣ್ ಕುಮಾರ್, ರಾಜಶೇಖರ್, ಸಂಜೀವಕುಮಾರ್, ಡಾ. ಶಿಲ್ಪ, ಕೌಶಲ್ಯಾ, ಗ್ರಂಥಪಾಲಕರಾದ ಡಾ. ರಮೇಶ್ ಜಾಬನೂರು, ಗ್ರಂಥ ಸಹಾಯಕರಾದ ಶೃತಿ ಹಾಗೂ ದೊಡ್ಡಲಕ್ಷ್ಮೀ ಮಂಜುಳಾ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಡಾ. ಸುದರ್ಶನ ಮದನಕರ್ ವಂದಿಸಿದರು.






