ಸಿ.ಎಂ. ಚಿತ್ತಾಪುರ ಭೇಟಿ ಹಿನ್ನೆಲೆ: ಜಿಲ್ಲಾ ಉಸ್ತುವಾರಿ ಸಚಿವರಿಂದ ಕಾರ್ಯಕ್ರಮದ ಸ್ಥಳ ಪರಿಶೀಲನೆ

ಚಿತ್ತಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಸಿ.ಎಂ. ಡಿ.ಕೆ. ಶಿವಕುಮಾರ್ ಮತ್ತು ರಾಜ್ಯಸಭೆ ವಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ರವಿವಾರ ಚಿತ್ತಾಪುರ ಪಟ್ಟಣದಲ್ಲಿ ಕ್ಷೇತ್ರದ ಸುಮಾರು 1,069 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಭೇಟಿ ನೀಡಿ ಅಂತಿಮ ಸಿದ್ಧತಾ ಕಾರ್ಯ ಪರಿಶೀಲಿಸಿದರು.
ವೇದಿಕೆ ಸ್ಥಳ, ಗ್ರೀನ್ ರೂಂ, ಸಾರ್ವಜನಿಕ ಆಸನ ಸ್ಥಳ, ಊಟದ ಸ್ಥಳ ಪರಿಶೀಲಿಸಿದ ಅವರು ಪ್ರದೇಶದ ಸಚಿವರು, ಶಾಸಕರು ಭಾಗವಹಿಸುವುದರಿಂದ ಭದ್ರತೆಯಲ್ಲಿ ಎಲ್ಲಿಯೂ ಲೋಪವಾಗದಂತೆ ಎಚ್ಚರ ವಹಿಸಬೇಕೆಂದು ಸ್ಥಳದಲ್ಲಿದ್ದ ಎಸ್.ಪಿ. ಅವರಿಗೆ ನಿರ್ದೇಶನ ನೀಡಿದರು.
ಸಾರ್ವಜನಿಕರಿಗೆ ಊಟ, ಕುಡಿಯುವ ನೀರಿನ ವ್ಯವಸ್ಥೆ, ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಬೇಕು. ಎಲ್ಲಾ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ನಿರ್ವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ಜರುಗುವಂತೆ ನೋಡಿಕೊಳ್ಳಬೇಕೆಂದರು.
ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನಮ್, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಹೆಚ್ಚುವರಿ ಎಸ್.ಪಿ. ಮಹೇಶ ಮೇಘಣ್ಣನವರ್, ಸೇಡಂ ಉಪ ವಿಭಾಗದ ಸಹಾಯಕ ಆಯುಕ್ತ ಪ್ರಭುರೆಡ್ಡಿ, ಚಿತ್ತಾಪುರ ತಹಶೀಲ್ದಾರ ನಾಗಯ್ಯ ಹಿರೇಮಠ, ಮುಖಂಡರಾದ ಭೀಮಣ್ಣ ಸಾಲಿ, ರಮೇಶ ಮರಗೋಳ, ನಾಗರೆಡ್ಡಿ ಪಾಟೀಲ ಕರದಾಳ, ಶಿವಾನಂದ ಪಾಟೀಲ ಮರತೂರು ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.







