ಬೌದ್ಧ ತತ್ವಗಳನ್ನು ರಂಗಭೂಮಿಗೆ ತರುವುದು ಸವಾಲಿನ ಕೆಲಸ: ಬಸವರಾಜ ಹೂಗಾರ

ಕಲಬುರಗಿ: ಬೌದ್ಧ ಧರ್ಮದ ವೈಚಾರಿಕ ಹಾಗೂ ತತ್ವಶಾಸ್ತ್ರೀಯ ವಿಚಾರಗಳನ್ನು ಸೃಜನಶೀಲ ನಾಟಕ ರೂಪದಲ್ಲಿ ರಂಗಭೂಮಿಗೆ ತರುವುದು ಅತ್ಯಂತ ಸವಾಲಿನ ಕೆಲಸವಾಗಿದ್ದು, ಈ ನಿಟ್ಟಿನಲ್ಲಿ ಲೇಖಕ ಡಾ. ಈಶ್ವರ ಎಂ. ಇಂಗನ್ ಅವರು ಬೌದ್ಧ ತತ್ವಗಳನ್ನು ಒಳಗೊಂಡ ಹತ್ತು ನಾಟಕಗಳನ್ನು ರಚಿಸಿರುವುದು ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ಅಪರೂಪದ ಹಾಗೂ ಪ್ರಥಮ ಪ್ರಯತ್ನವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಬುರಗಿ ವಲಯದ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಹೇಳಿದರು.
ನಗರದ ಕರ್ನಾಟಕ ರಂಗಾಯಣ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ರಂಗಾಯಣ ಅವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ "ಡಾ. ಈಶ್ವರ ಎಂ. ಇಂಗನ್ ಅವರ ಹತ್ತು ಬೌದ್ಧ ನಾಟಕಗಳ ಕುರಿತು ಉಪನ್ಯಾಸ ಮತ್ತು ಸಂವಾದ" ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೌದ್ಧ ಧರ್ಮದ ತಾತ್ವಿಕ ಚಿಂತನೆಗಳನ್ನು ಇಷ್ಟೊಂದು ವ್ಯಾಪಕವಾಗಿ ನಾಟಕ ರೂಪಕ್ಕೆ ತಂದ ಕೀರ್ತಿ ಡಾ. ಈಶ್ವರ ಎಂ. ಇಂಗನ್ ಅವರಿಗೆ ಸಲ್ಲುತ್ತದೆ ಎಂದು ಹೂಗಾರ ಪ್ರಶಂಸಿಸಿದರು.
ಕಲಬುರಗಿ ರಂಗಾಯಣದ ಮಾಜಿ ನಿರ್ದೇಶಕ ಪ್ರಭಾಕರ ಜೋಷಿ ಮಾತನಾಡಿ, ಇಂಗನ್ ಅವರ ನಾಟಕಗಳು ಚಾರಿತ್ರಿಕ ಸಂಗತಿಗಳನ್ನು ತಾತ್ವಿಕ ನೆಲೆಯಲ್ಲಿ ವಿಶ್ಲೇಷಿಸುವುದರ ಜೊತೆಗೆ ಸಮಕಾಲೀನ ಸಮಾಜದ ಪ್ರಶ್ನೆಗಳಿಗೂ ಪರಿಣಾಮಕಾರಿಯಾಗಿ ಸ್ಪಂದಿಸುತ್ತವೆ ಎಂದು ಹೇಳಿದರು.
ಹಿರಿಯ ಸಾಹಿತಿ ಡಾ. ಶ್ರೀಶೈಲ ನಾಗರಾಳ ಮಾತನಾಡಿ, ನಾಟಕವು ಅಭಿನಯ, ಸಂಭಾಷಣೆ, ನೃತ್ಯ, ಸಂಗೀತ ಹಾಗೂ ರಂಗಸಜ್ಜಿಕೆಗಳ ಸಮನ್ವಯದಿಂದ ರೂಪುಗೊಳ್ಳುವ ಅತ್ಯಂತ ಸಂಕೀರ್ಣ ಕಲಾ ಮಾಧ್ಯಮವಾಗಿದೆ. ಇಂತಹ ಮಾಧ್ಯಮದಲ್ಲಿ ಬೌದ್ಧ ಚಿಂತನೆಗಳನ್ನು ಒಳಗೊಂಡ ಹತ್ತು ನಾಟಕಗಳು ಸಾಹಿತ್ಯಿಕವಾಗಿ ಸಮರ್ಥ ರೂಪ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕಲಬುರಗಿ ರಂಗಾಯಣದ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ ಮಾತನಾಡಿ, ಬೌದ್ಧ ಹಾಗೂ ವಚನ ಸಾಹಿತ್ಯ ಆಧಾರಿತ ವೈಚಾರಿಕ ಮತ್ತು ಪ್ರಗತಿಪರ ನಾಟಕಗಳು ಇಂದಿನ ಸಮಾಜದಲ್ಲಿ ಜನಸಾಮಾನ್ಯರನ್ನು ತಲುಪುವ ಅಗತ್ಯವಿದೆ. ಯುವ ರಂಗಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿರುವ ಡಾ. ಈಶ್ವರ ಎಂ. ಇಂಗನ್ ಅವರ ಬದ್ಧತೆ ಶ್ಲಾಘನೀಯವಾಗಿದೆ ಎಂದು ಹೇಳಿದರು.
ನಾಟಕಗಳ ಲೇಖಕ ಡಾ. ಈಶ್ವರ ಎಂ. ಇಂಗನ್ ಮಾತನಾಡಿ, ಬೌದ್ಧ ವಿಹಾರದ ಗ್ರಂಥಾಲಯದಲ್ಲಿದ್ದ ಬುದ್ಧನ ಜೀವನಚರಿತ್ರೆ ಹಾಗೂ ಬೌದ್ಧ ಮಹಿಳೆಯರ ಕುರಿತ ಕಥೆಗಳು ತಮ್ಮ ನಾಟಕ ರಚನೆಗೆ ಪ್ರೇರಣೆಯಾದವು. ಸಹೋದರ ಪ್ರೊ. ಎಚ್.ಟಿ. ಪೋತೆ ಅವರ ಸಹಕಾರ ಹಾಗೂ ಸ್ನೇಹಿತರ ಸಲಹೆ-ಸೂಚನೆಗಳೊಂದಿಗೆ ಒಟ್ಟು ಹತ್ತು ಬೌದ್ಧ ನಾಟಕಗಳನ್ನು ಪೂರ್ಣಗೊಳಿಸಲು ಸಾಧ್ಯವಾಯಿತು ಎಂದು ತಮ್ಮ ಸಾಹಿತ್ಯಿಕ ಪಯಣವನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಪ್ರೊ. ಎಚ್.ಟಿ. ಪೋತೆ, ಕರ್ನಾಟಕ ರಂಗಾಯಣದ ಆಡಳಿತಾಧಿಕಾರಿ ಸಿದ್ರಾಮ ಸಿಂಧೆ, ಎಂ.ಬಿ. ಕಟ್ಟಿ, ಡಾ. ಶೈಲಜಾ ಬಾಗೇವಾಡಿ, ಸಂತೋಷ ಕಂಬಾರ, ನಾರಾಯಣ ಕುಲಕರ್ಣಿ, ಅರುಣ್ ಜೋಳದಕೂಡ್ಲಿಗಿ, ಸೂರ್ಯಕಾಂತ ಸುಜ್ಯಾತ, ಪ್ರೊ. ವಸಂತ ನಾಸಿ ಹಾಗೂ ರಂಗಾಯಣದ ರೆಪರ್ಟರಿ ಕಲಾವಿದರು ಉಪಸ್ಥಿತರಿದ್ದರು.






