ಲಿಂಗಾಯತ ಧರ್ಮದ ತತ್ವ, ಪರಂಪರೆ, ಅಸ್ತಿತ್ವದ ಕುರಿತು ಅರಿವಿರಲಿ: ಗುರುಮಹಾಂತ ಸ್ವಾಮೀಜಿ

ಆಳಂದ: ಇಂದಿನ ಕಾಲಘಟ್ಟದಲ್ಲಿ ಬಸವಣ್ಣನವರ ಅಭಿಮಾನಿಗಳು ಹಾಗೂ ಪ್ರಗತಿಪರ ಚಿಂತಕರು ಲಿಂಗಾಯತ ಧರ್ಮದ ತತ್ವಗಳು, ಅದರ ಪರಂಪರೆ ಮತ್ತು ಅಸ್ತಿತ್ವದ ಕುರಿತು ಗಂಭೀರವಾಗಿ ತಿಳಿವಳಿಕೆ ಪಡೆದುಕೊಳ್ಳಬೇಕಾದ ಸಮಯ ಬಂದಿದೆ ಎಂದು ಇಲಕಲ್‌ನ ಶ್ರೀವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಶ್ರೀ ಗುರುಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ತೋಂಟದಾರ್ಯ ಅನುಭವ ಮಂಟಪದಲ್ಲಿ ರವಿವಾರ ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ನಡೆದ ಅಖಿಲ ಕರ್ನಾಟಕ ಶರಣ ಸಾಹಿತ್ಯ 2ನೇ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರಾಗಿ ಮಾತನಾಡಿದ ಶ್ರೀ ಗುರುಮಹಾಂತ ಸ್ವಾಮೀಜಿ, ಅರಿವಿಲ್ಲದೆ ಹೋದರೆ ನಮ್ಮ ಅಸ್ತಿತ್ವವೇ ಮೌನವಾಗಿ ಸಮಾಧಿಯಾಗುವ ಅಪಾಯವಿದೆ. ಪ್ರಜ್ಞೆ ಮತ್ತು ಜಾಗೃತಿ ತಂದುಕೊಳ್ಳುವುದು ಇಂದಿನ ಅತ್ಯಾವಶ್ಯಕತೆ ಇದೆ ಎಂದರು.
ಲಿಂಗಾಯತರು ಹಿಂದೂ ಧರ್ಮದ ವಿರೋಧಿಗಳಲ್ಲ. ಆದರೆ ನಮ್ಮ ಧರ್ಮದ ರಕ್ಷಣೆಯನ್ನು ನಾವು ಸ್ವತಃ ಮಾಡಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದರು.
ಹಿಂದೂ ಧರ್ಮದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಷ್ಯ ಮತ್ತು ಶೂದ್ರ ಎಂಬ ನಾಲ್ಕು ವರ್ಣಗಳಿದ್ದು, ಅಂಗದ ಮೇಲೆ ಲಿಂಗ ಕಟ್ಟಿಕೊಂಡ ಲಿಂಗಾಯತರು ಯಾವ ವರ್ಣಕ್ಕೆ ಸೇರುತ್ತಾರೆ ಎಂಬ ಪ್ರಶ್ನೆಯನ್ನು ಸಮಾಜವೇ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ವರ್ಣವ್ಯವಸ್ಥೆಯಲ್ಲಿ ಶೂದ್ರರಿಗೆ ಶಿಕ್ಷಣ, ಆಸ್ತಿ, ಆರ್ಥಿಕ–ಸಾಮಾಜಿಕ ಸ್ವಾತಂತ್ರ‍್ಯ ಇಲ್ಲದ ಸ್ಥಿತಿ ಇತ್ತು. ಮಹಿಳೆಯರನ್ನೂ ಸಹ ಸಂಪೂರ್ಣ ಹಕ್ಕುಗಳಿಲ್ಲದವರಂತೆ ನೋಡಲಾಗುತ್ತಿತ್ತು. ಇಂತಹ ಅನ್ಯಾಯಕರ ವ್ಯವಸ್ಥೆಯನ್ನು 12ನೇ ಶತಮಾನದಲ್ಲೇ ಬಸವಣ್ಣನವರು ತೊಡೆದು ಹಾಕಿದರು. ನಂತರ ಸ್ವಾತಂತ್ರ‍್ಯ ಭಾರತದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಎಲ್ಲಾ ವರ್ಗದ ಮಹಿಳೆ–ಪುರುಷರಿಗೆ ಸಮಾನ ಹಕ್ಕು, ಆಸ್ತಿ, ನ್ಯಾಯ ಮತ್ತು ಧಾರ್ಮಿಕ ಸ್ವಾತಂತ್ರ‍್ಯವನ್ನು ನೀಡಿದರು ಎಂದು ಸ್ವಾಮೀಜಿ ಹೇಳಿದರು.
ಪ್ರಥಮ ಸಮ್ಮೇಳನದ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಹಾಗೂ ಹಿರಿಯ ಸಾಹಿತಿ ರಂಜಾನ್ ದರ್ಗಾ ಮಾತನಾಡಿ, ಲಿಂಗಾಯತ ಸಮಾಜದಲ್ಲಿ ಮಾತ್ರ ನಿಜವಾದ ಬದಲಾವಣೆ ಸಾಧ್ಯವಿದೆ. ಆದರೆ ಆ ಬದಲಾವಣೆಗೆ ಸ್ವವಿಮರ್ಶೆ ಅನಿವಾರ್ಯ. ಸ್ವವಿಮರ್ಶೆ ಇಲ್ಲದೆ ಭವಿಷ್ಯವಿಲ್ಲ ಎಂದು ಹೇಳಿದರು.
ಇಲ್ಲಕಲದ ಶ್ರೀಗಳು ಹಾಗೂ ಅನುಭವ ಮಂಟಪದ ಕೋರಣೇಶ್ವರ ಮಹಾಸ್ವಾಮಿಗಳು ಸಮಾಜ ಬದಲಾವಣೆಗೆ ಮಹಾನ್ ಶಕ್ತಿಯಾಗಿದ್ದಾರೆ. ಈ ಶಕ್ತಿಯನ್ನು ಸಮಗ್ರ ನಾಡಿನ ಪರಿವರ್ತನೆಗೆ ಬಳಸಬಹುದು. ಆದರೆ ಲಿಂಗಾಯತರು ಸ್ವವಿಮರ್ಶೆಯಿಂದ ಬಹುದೂರ ಉಳಿದಿದ್ದಾರೆ. ವಿಮರ್ಶೆ ಮಾಡಿಕೊಳ್ಳದೇ ಹೋದರೆ ಸಮಾಜದ ಭವಿಷ್ಯವೇ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಎಚ್ಚರಿಸಿದರು.
ವಚನ ಚಿಂತನಾ ಗೋಷ್ಠಿಗೆ ಸಾಮಾಜಿಕ ಹೋರಾಟಗಾರ್ತಿ ಕೆ. ನೀಲಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮ್ಮೇಳನಕ್ಕೆ ಅನುಭವ ಮಂಟಪದ ಶ್ರೀ ಕೋರಣೇಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಸಾಹಿತಿ ಡಾ. ಮೀನಾಕ್ಷಿ ಬಾಳಿ ಉಪನ್ಯಾಸ ನೀಡಿದರು. ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೆಶ ಎಸ್. ಉಪ್ಪಾರ್ ಪ್ರಸ್ತಾವಿಕ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಡಾ. ವಿಶ್ವರಾಧ್ಯ ಸಂತ್ಯoಪೇಟೆ ಮಾತನಾಡಿದರು. ಸಮಾರೋಪ ನುಡಿಯನ್ನು ವಿಜಯಪುರದ ಶರಣ ಸಂಸ್ಕೃತಿ ಚಿಂತಕ ಡಾ. ಜಿ. ಎಸ್. ಪಾಟೀಲ್ ಮಂಡಿಸಿದರು.
ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೆಶ ಎಸ್. ಉಪ್ಪಾರ್ ಉಪಸ್ಥಿತರಿದ್ದರು.
ಈ ಸಂದರ್ಭ ಶರಣ ಸಂಕುಲ ರತ್ನ ರಾಷ್ಟ್ರೀಯ ಪ್ರಶಸ್ತಿಯನ್ನು ಸಾಧಕರಿಗೆ ಪ್ರದಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯತ್ ಮಹಾಸಭಾ ಜಿಲ್ಲಾ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್, ತಾಲೂಕು ಅಧ್ಯಕ್ಷ ರಮೇಶ ಲೋಹಾರ, ಮುಖಂಡ ಬಾಬುರಾವ್ ಮಡ್ಡೆ, ಮಲ್ಲಿನಾಥ ಯಲಶೆಟ್ಟಿ, ಬಾಬುರಾವ್ ಮಡ್ಡೆ, ರಾಜಶೇಖರ ಯಂಕoಚಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.







