ಜೂನ್ನಿಂದ ಬೆಂಗಳೂರು-ಬೀದರ್, ಕಲಬುರಗಿ ವಿಮಾನ ಸೇವೆ ಪುನಾರಂಭ : ಸಚಿವ ಎಂ.ಬಿ.ಪಾಟೀಲ್

ಸಾಂದರ್ಭಿಕ ಚಿತ್ರ | Photo Credit : magnific
ಬೆಂಗಳೂರು : ಕಲ್ಯಾಣ ಕರ್ನಾಟಕ ಭಾಗದ ಬೀದರ್ ಮತ್ತು ಕಲಬುರಗಿ ಜಿಲ್ಲಾ ಕೇಂದ್ರಗಳಿಗೆ ಕ್ರಮವಾಗಿ ಜೂ.1 ಹಾಗೂ ಜೂ.10ರಿಂದ ಬೆಂಗಳೂರಿನಿಂದ ವಿಮಾನಯಾನ ಸೇವೆ ಪುನಾರಂಭವಾಗಲಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಸ್ಟಾರ್ ಏರ್ ಲೈನ್ಸ್ (ಘೋಡಾವತ್ ಎಂಟರ್ಪ್ರೈಸಸ್ ಲಿಮಿಟೆಡ್) ಸಂಸ್ಥೆಯು ಬೆಂಗಳೂರು-ಬೀದರ್-ಬೆಂಗಳೂರು ಹಾಗೂ ಬೆಂಗಳೂರು-ಕಲಬುರಗಿ-ಬೆಂಗಳೂರು ಮಾರ್ಗದಲ್ಲಿ ವಿಮಾನಯಾನ ಸೇವೆ ಒದಗಿಸಲಿದೆ ಎಂದರು.
ಈ ಸೇವೆಗೆ ಬೆಂಬಲವಾಗಿ ರಾಜ್ಯ ಸರ್ಕಾರವು 28.47 ಕೋಟಿ ರೂ. ಗಳನ್ನು ‘ವಯಬಲಿಟಿ ಗ್ಯಾಪ್ ಫಂಡಿಂಗ್’ ರೂಪದಲ್ಲಿ ನೀಡುತ್ತಿದೆ. ಎರಡೂ ಮಾರ್ಗಗಳ ವಿಮಾನ ಪ್ರಯಾಣಕ್ಕೆ ಈಗಾಗಲೇ ಮುಂಗಡ ಬುಕ್ಕಿಂಗ್ ಆರಂಭವಾಗಿದೆ ಎಂದು ತಿಳಿಸಿದ್ದಾರೆ.
ಕಲಬುರಗಿಗೆ ಇದ್ದ ವಿಮಾನ ಸೇವೆ ನಷ್ಟದ ಕಾರಣ ಸ್ಥಗಿತಗೊಂಡಿತ್ತು. ಬೀದರ್ಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ವಿಶೇಷ ನೆರವಿನಿಂದ ಒಂದು ವಿಮಾನ ಓಡಾಡುತ್ತಿತ್ತು. ಇದೀಗ ಕೈಗಾರಿಕೆ, ಶಿಕ್ಷಣ, ಪ್ರವಾಸೋದ್ಯಮ, ಕೃಷಿ ಹಾಗೂ ವಾಣಿಜ್ಯ ಚಟುವಟಿಕೆಗಳ ಬೆಳವಣಿಗೆಯನ್ನು ಪರಿಗಣಿಸಿ ಪ್ರಾದೇಶಿಕ ವಿಮಾನಯಾನ ಸಂಪರ್ಕ ಯೋಜನೆಯಡಿ ಸೇವೆಯನ್ನು ಮತ್ತೆ ಆರಂಭಿಸಲಾಗುತ್ತಿದೆ ಎಂದು ವಿವರಿಸಿದರು.
ರಾಜ್ಯದ ಎರಡನೇ ಮತ್ತು ಮೂರನೇ ಹಂತದ ನಗರಗಳಿಗೆ ವಿಮಾನ ಸಂಪರ್ಕ ಒದಗಿಸುವುದು ಸರ್ಕಾರದ ಆದ್ಯತೆಯಾಗಿದ್ದು, ಇದರಿಂದ ಪ್ರಾದೇಶಿಕ ಆರ್ಥಿಕ ಅಭಿವೃದ್ಧಿ ಮತ್ತು ಮೂಲಸೌಕರ್ಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಪಾಟೀಲ ಹೇಳಿದರು.
ಬೀದರ್ ಹಾಗೂ ಕಲಬುರಗಿ ವಿಮಾನ ಸೇವೆ ಮರುಆರಂಭದ ಕುರಿತು ಸಚಿವರು ಇತ್ತೀಚೆಗೆ ಕಲ್ಯಾಣ ಕರ್ನಾಟಕ ಭಾಗದ ಸಚಿವರು ಹಾಗೂ ವಿವಿಧ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದರು.






