ಬೆಂಗಳೂರು ನಿಲ್ದಾಣದಲ್ಲಿ ಯಾರ್ಡ್ ಕಾಮಗಾರಿ: ಕಲಬುರಗಿ ಸಂಚಾರದ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ

ಸಾಂದರ್ಭಿಕ ಚಿತ್ರ (PTI)
ಕಲಬುರಗಿ: ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ಕೈಗೊಳ್ಳಲಾಗುತ್ತಿರುವ ಯಾರ್ಡ್ ಪುನರ್ರಚನೆ ಹಾಗೂ ಇಂಟರ್ಲಾಕಿಂಗ್ (ಎನ್ಐ) ಕಾಮಗಾರಿಯ ಹಿನ್ನೆಲೆಯಲ್ಲಿ ಜುಲೈ 31ರಿಂದ ಆಗಸ್ಟ್ 3/4ರವರೆಗೆ ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದಲ್ಲಿ ಸಂಚಾರ ನಿರ್ಬಂಧ ಜಾರಿಯಾಗಲಿದ್ದು, ಇದರ ಪರಿಣಾಮವಾಗಿ ಕಲಬುರಗಿ ನಿಲ್ದಾಣಕ್ಕೆ ಸಂಬಂಧಿಸಿದ ಕೆಲ ರೈಲುಗಳ ಸಂಚಾರದಲ್ಲಿ ಬದಲಾವಣೆ ಹಾಗೂ ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದೆ.
ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆಯ ಪ್ರಕಾರ, ರೈಲು ಸಂಖ್ಯೆ 22231 ಕಲಬುರಗಿ–ಎಸ್ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್ ಆಗಸ್ಟ್ 1ರಿಂದ 3ರವರೆಗೆ ಯಲಹಂಕ ನಿಲ್ದಾಣದಲ್ಲೇ ತನ್ನ ಸಂಚಾರವನ್ನು ಅಂತ್ಯಗೊಳಿಸಲಿದೆ. ಅದೇ ರೀತಿ ರೈಲು ಸಂಖ್ಯೆ 22232 ಎಸ್ಎಂವಿಟಿ ಬೆಂಗಳೂರು–ಕಲಬುರಗಿ ಎಕ್ಸ್ಪ್ರೆಸ್ ಆಗಸ್ಟ್ 1ರಿಂದ 3ರವರೆಗೆ ಯಲಹಂಕ ನಿಲ್ದಾಣದಿಂದಲೇ ತನ್ನ ಪ್ರಯಾಣವನ್ನು ಆರಂಭಿಸಲಿದೆ.
ಇದಲ್ಲದೆ, ರೈಲು ಸಂಖ್ಯೆ 16563 ಬೆಂಗಳೂರು ಕ್ಯಾಂಟೋನ್ಮೆಂಟ್–ಕಲಬುರಗಿ ಸಾಪ್ತಾಹಿಕ ಎಕ್ಸ್ಪ್ರೆಸ್ (ಆಗಸ್ಟ್ 1ರ ಪ್ರಯಾಣ) ಹಾಗೂ ರೈಲು ಸಂಖ್ಯೆ 16564 ಕಲಬುರಗಿ–ಬೆಂಗಳೂರು ಕ್ಯಾಂಟೋನ್ಮೆಂಟ್ ಸಾಪ್ತಾಹಿಕ ಎಕ್ಸ್ಪ್ರೆಸ್ (ಆಗಸ್ಟ್ 2ರ ಪ್ರಯಾಣ) ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.
ರೈಲ್ವೆ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸುವುದು ಹಾಗೂ ಸುರಕ್ಷಿತ ಸಂಚಾರವನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಇದರಿಂದ ಪ್ರಯಾಣಿಕರಿಗೆ ಉಂಟಾಗುವ ತಾತ್ಕಾಲಿಕ ಅನಾನುಕೂಲತೆಗೆ ಸಹಕರಿಸುವಂತೆ ರೈಲ್ವೆ ಇಲಾಖೆ ಮನವಿ ಮಾಡಿದ್ದು, ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಂಡು, ರೈಲುಗಳ ವೇಳಾಪಟ್ಟಿಯನ್ನು ಪರಿಶೀಲಿಸಿ ಪ್ರಯಾಣಿಸುವಂತೆ ಸೂಚಿಸಿದೆ.






