ಮಾ.10ರಂದು ಕಲಬುರಗಿಯಲ್ಲಿ "ಭೀಮ ಗಾಯನ"

ಕಲಬುರಗಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕಲಬುರಗಿ ಜಿಲ್ಲಾಡಳಿತ ಸಂಯುಕ್ತ ಆಶ್ರಯದಲ್ಲಿ ಇದೇ ಮಾರ್ಚ್ 10 (ಮಂಗಳವಾರ) ರಂದು ಬೆಳಗ್ಗೆ 11.30 ಗಂಟೆಗೆ ಕಲಬುರಗಿ ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ ಮಹಾನ್ ಚಿಂತನೆಗೆ ಗಾನ ನಮನ ಅರ್ಪಿಸುವ "ಭೀಮ ಗಾಯನ" ಕಾರ್ಯಕ್ರಮ ಆಯೋಜಿಸಲಾಗಿದೆ.
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನ ಸಾಧನೆ, ಸಮಾನತೆಯ ಹೋರಾಟ, ಅಸ್ಪೃಶ್ಯತೆ ನಿರ್ಮೂಲನೆ ಹಾಗೂ ಸ್ತ್ರೀ ಸಮಾನತೆ ಕುರಿತ ಗೀತೆಗಳನ್ನೊಳಗೊಂಡ ಸಮಾನತೆಯ ಸ್ವರ ಸಂಭ್ರಮ ಇದಾಗಿದೆ. ಭೀಮನ ಆದರ್ಶಗಳನ್ನು ಸ್ವರಗಳಲ್ಲಿ ಜೀವಂತಗೊಳಿಸುವ ಜಾಗೃತಿ, ಆತ್ಮಗೌರವ ಮತ್ತು ಸಮಾನತೆಯ ಸಂಗೀತ ಕಾರ್ಯಕ್ರಮವೇ ಭೀಮ ಗಾಯನವಾಗಿದೆ.
ಚಿಕ್ಕಬಳ್ಳಾಪುರದ ಸಿದ್ಧಾರ್ಥ ಯುವ ಕ್ರೀಡಾ ಸಾಂಸ್ಕೃತಿಕ ಅಭಿವೃದ್ಧಿ ಸಂಘ ಭೀಮ ಗಾಯನವನ್ನು ಪ್ರಸ್ತುತಪಡಿಸಲಿದೆ.
ಡಾ. ಬಿ.ಆರ್. ಅಂಬೇಡ್ಕರ್ ಅವರು ಭೇಟಿ ನೀಡಿರುವ ರಾಜ್ಯದ ಪ್ರಮುಖ ಸ್ಥಳಗಳ ಪೈಕಿ ಆಯ್ದ 10 ಸ್ಥಳಗಳಲ್ಲಿ ಇಲಾಖೆಯಿಂದ ಭೀಮ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅದರಂತೆ ಕಲಬುರಗಿ ಜಿಲ್ಲೆಯ ವಾಡಿ ಪಟ್ಟಣಕ್ಕೆ ಅಂಬೇಡ್ಕರ್ ಭೇಟಿ ನೀಡಿದ ಸ್ಮರಣಾರ್ಥವಾಗಿ ಕಲಬುರಗಿ ಜಿಲ್ಲೆಯಲ್ಲಿಯೂ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಜಡಿಯಪ್ಪ ಗೆದ್ದಗಟ್ಟಿ ತಿಳಿಸಿದ್ದಾರೆ.
ಸಾಮಾಜಿಕ ನ್ಯಾಯದ ಮಹಾನ್ ಚಿಂತಕ, ಹಕ್ಕುಗಳ ಹೋರಾಟಗಾರ ಹಾಗೂ ದಮನಿತರ ಧ್ವನಿಯಾಗಿರುವ ಅಂಬೇಡ್ಕರ್ ಅವರ ಚಿಂತನೆಗೆ ಗಾನ ನಮನ ಅರ್ಪಿಸುವ ಅಂಬೇಡ್ಕರ್ ಗೀತೆಗಳ ಮಹೋತ್ಸವಕ್ಕೆ ಜಿಲ್ಲೆಯ ದಲಿತಪರ ಹಾಗೂ ಇತರೆ ಎಲ್ಲಾ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಉಪನಿರ್ದೇಶಕ ಜಡಿಯಪ್ಪ ಗೆದ್ದಗಟ್ಟಿ ಅವರು ಮನವಿ ಮಾಡಿದ್ದಾರೆ.







