ಭೂಸನೂರ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆ| ಬಿಜೆಪಿ ಮುಖಂಡರಿಂದಲೇ ಚುನಾವಣಾಧಿಕಾರಿಗಳ ಮೇಲೆ ಹಲ್ಲೆ: ಆರ್.ಕೆ ಪಾಟೀಲ್ ಗಂಭೀರ ಆರೋಪ

ಕಲಬುರಗಿ: ಬುಧವಾರ ನಡೆದಿದ್ದ ಆಳಂದ ತಾಲೂಕಿನ ಭೂಸನೂರ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಬಿಜೆಪಿ ಮುಖಂಡರು ಉದ್ದೇಶಪೂರ್ವಕವಾಗಿ ಚುನಾವಣಾಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕೆಎಂಎಫ್ ಅಧ್ಯಕ್ಷ ಆರ್.ಕೆ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಕೆ ಪಾಟೀಲ್, ಆಳಂದದಲ್ಲಿ ನಡೆದಿದೆ ಎನ್ನಲಾಗಿರುವ ಮತಗಳ್ಳತನ ಪ್ರಕರಣವನ್ನು ದಿಕ್ಕುತಪ್ಪಿಸಲು ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಬಿಜೆಪಿಗರು ಗಲಭೆ ನಡೆಸಿದ್ದಾರೆ. ಚುನಾವಣಾಧಿಕಾರಿಗಳ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿರುವುದು ಸಿಸಿಟಿವಿ ಕ್ಯಾಮರಾಗಳಲ್ಲಿ ದಾಖಲಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಯಲಿ ಎಂದು ಆಗ್ರಹಿಸಿದರು.
ಮತಗಟ್ಟೆ ಸಂಖ್ಯೆ 1ರಲ್ಲಿ ಮತಪತ್ರ ಜೋಡಣೆಯ ಪುಸ್ತಕದಲ್ಲಿ 'ಜನತಾ ಬಜಾರ್' ಚುನಾವಣೆಯ ಮತಪತ್ರಗಳು ಕಂಡುಬಂದಿರುವುದು ನಿಜ. ಈ ಕುರಿತಾಗಿ ರೈತ ಪೆನಲ್ ನ ಅಭ್ಯರ್ಥಿಗಳೇ ಖುದ್ದಾಗಿ ಚುನಾವಣಾ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಇದನ್ನು ಒಪ್ಪಿ ಸರಿಪಡಿಸಲು ಅಧಿಕಾರಿಗಳು ಪ್ರಯತ್ನಿಸಿದ್ದರು. ಇದೇ ವೇಳೆ ಬಿಜೆಪಿ ಮುಖಂಡರು, ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಅವರೇ ಚುನಾವಣೆ ನಿಲ್ಲಿಸಲು ಮತ ಪೆಟ್ಟಿಗೆಯಲ್ಲಿ ನೀರು ಸುರಿದಿದ್ದಾರೆ ಎಂದು ಆರೋಪಿಸಿದರು.
ಈ ಹಿಂದೆ ಶಾಸಕ ಬಿ.ಆರ್.ಪಾಟೀಲ್ ಬೆಂಬಲಿಗರು ಕಾರ್ಖಾನೆಯ ಅಧ್ಯಕ್ಷರಾಗಿದ್ದ ವೇಳೆ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ 12.50 ಕೋಟಿಯಷ್ಟು ಠೇವಣಿ ಇಟ್ಟಿದ್ದಾರೆ. ಇಂತಹ ಅನೇಕ ಯೋಜನೆಗಳು ಮಾಡಿದ್ದರಿಂದ ಮತದಾರರು ರೈತ ಪೆನಲ್ ಅನ್ನು ಬೆಂಬಲಿಸಿದ್ದರು. ಸೋಲು ಅನುಭವಿಸುವ ಸಾಧ್ಯತೆ ಹೆಚ್ಚಾಗಿದ್ದರಿಂದ ಹೇಗಾದರೂ ಮಾಡಿ ಮತದಾನವನ್ನು ಸ್ಥಗಿತಗೊಳಿಸಬೇಕು ಎಂದು ಯೋಜನೆ ರೂಪಿಸಿದ ಹರ್ಷಾನಂದ ಗುತ್ತೇದಾರ್ ಹಾಗೂ ಅವರ ಬೆಂಬಲಿಗರು ಈ ಗಲಾಟೆ ಸೃಷ್ಟಿಸಿದ್ದಾರೆ. ಬಳಿಕ ಹೆದ್ದಾರಿಯನ್ನು ತಡೆದು ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿದ್ದಾರೆ ಎಂದು ಆರ್.ಕೆ.ಪಾಟೀಲ್ ಆರೋಪಿಸಿದರು.
ಮತಪತ್ರ ಅಲ್ಲಿ ಹೇಗೆ ಬಂದಿದೆ? ಯಾರು ಅಲ್ಲಿ ತಂದಿಟ್ಟಿದ್ದಾರೆ ಎನ್ನುವುದರ ಬಗ್ಗೆ ತನಿಖೆಯಾಗಲಿ. ಆದರೆ ಬಿಜೆಪಿ ಮುಖಂಡರು ಯಾವುದೇ ಆಧಾರವಿಲ್ಲದೆ ಎಲ್ಲದ್ದಕ್ಕೂ ಶಾಸಕ ಬಿ.ಆರ್ ಪಾಟೀಲ್, ಆರ್.ಕೆ.ಪಾಟೀಲ್ ಕಾರಣ ಎಂದು ಆರೋಪಿಸುತ್ತಿದ್ದಾರೆ. ಅವರ ಆರೋಪಗಳೆಲ್ಲವೂ ಸುಳ್ಳು. ಸತ್ಯವನ್ನು ಮಾತನಾಡುವುದನ್ನು ಅವರು ಕಲಿಯಲಿ ಎಂದು ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದರು.
ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಮಾಜಿ ಸದಸ್ಯ ಸಿದ್ದರಾಮ ಪ್ಯಾಟೆ, ಶಿವಪುತ್ರಪ್ಪ ಪಾಟೀಲ್, ಅಶೋಕ್ ಸಾವಳೇಶ್ವರ್, ಗುರುಲಿಂಗಮಜಂಗಮ ಮಾಲಿಪಾಟೀಲ್, ಬಸವರಾಜ ಉಪ್ಪಿನ, ಧರ್ಮರಾಜ ಸಾಹು, ಶ್ರೀಮಂತ ವಗ್ದರ್ಗಿ, ಸಿದ್ದರಾಮ ಸಾಲಿಮನಿ, ಸುಭಾಷ್, ಶಾಂತೇಶ್ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







