ಕಲಬುರಗಿ | ಬಹುಭಾಷಾ ಕವಿಗೋಷ್ಠಿ; ಸಾಕ್ಷಿಯಾದ ಬೈಕ್ ರ‍್ಯಾಲಿ

ಕಲಬುರಗಿ: ಡಾ. ಶರಣಬಸಪ್ಪ ಅಪ್ಪಾಜಿಯವರ ಪ್ರಥಮ ಪುಣ್ಯಸ್ಮರಣೆಯ ಅಂಗವಾಗಿ ನಗರದ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ರವಿವಾರ ಬೆಳಿಗ್ಗೆ ವಿಶೇಷ ಬಹುಭಾಷಾ ಕವಿಗೋಷ್ಠಿ ಹಾಗೂ ಮಹಿಳೆಯರ ಬೃಹತ್ ಬೈಕ್ ರ‍್ಯಾಲಿ ನಡೆಯಿತು.
ಕಾವ್ಯ, ಸಾಹಿತ್ಯ ಮತ್ತು ಭಾವನೆಗಳ ಸಂಗಮವಾಗಿದ್ದ ಬಹುಭಾಷಾ ಕವಿಗೋಷ್ಠಿಯಲ್ಲಿ ವಿವಿಧ ಭಾಷೆಗಳ ಕವಿಗಳು ಹಾಗೂ ಕಾವ್ಯಾಸಕ್ತರು ಭಾಗವಹಿಸಿ ಅಪ್ಪಾಜಿಯವರ ಸ್ಮರಣೆಗೆ ಕಾವ್ಯನಮನ ಸಲ್ಲಿಸಿದರು.
ಎರಡು ಅಧಿವೇಶನಗಳಲ್ಲಿ ನಡೆದ ಕವಿಗೋಷ್ಠಿಯಲ್ಲಿ ಪುರುಷ ಹಾಗೂ ಮಹಿಳಾ ಕವಿಗಳು ಉತ್ಸಾಹದಿಂದ ಪಾಲ್ಗೊಂಡರು. ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಕವಿಗಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸುವ ಮೂಲಕ ಸಾಹಿತ್ಯದ ವೈವಿಧ್ಯತೆಯನ್ನು ಅನಾವರಣಗೊಳಿಸಿದರು.
ಡಾ. ಶರಣಬಸಪ್ಪ ಅಪ್ಪಾಜಿಯವರ ಪ್ರಥಮ ಪುಣ್ಯಸ್ಮರಣೆಯ ಅಂಗವಾಗಿ ನಡೆದ ಮಹಿಳೆಯರ ಬೃಹತ್ ಬೈಕ್ ರ‍್ಯಾಲಿ ಗಮನ ಸೆಳೆಯಿತು. ಶರಣಬಸವ ವಿಶ್ವವಿದ್ಯಾಲಯದ ಆವರಣದಿಂದ ಆರಂಭಗೊಂಡ ರ‍್ಯಾಲಿಯನ್ನು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿಯವರು ಧ್ವಜ ತೋರಿಸುವ ಮೂಲಕ ಉದ್ಘಾಟಿಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ರ‍್ಯಾಲಿಯು ಶರಣಬಸವೇಶ್ವರ ದೇವಸ್ಥಾನವನ್ನು ತಲುಪಿತು.
ಶಿಕ್ಷಣದ ಮೂಲಕ ಸಮಾಜ ಪರಿವರ್ತನೆ ಹಾಗೂ ಮಹಿಳಾ ಸಬಲೀಕರಣಕ್ಕೆ ಡಾ. ಅಪ್ಪಾಜಿಯವರು ನೀಡಿದ ಕೊಡುಗೆಯನ್ನು ಸ್ಮರಿಸಿದ ರ‍್ಯಾಲಿ, ಅವರ ಸೇವಾ ಪರಂಪರೆಯನ್ನು ಮುಂದುವರಿಸುವ ಸಂದೇಶವನ್ನು ಸಾರಿತು.
ರ‍್ಯಾಲಿಯಲ್ಲಿ ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ, ಕುಲಸಚಿವೆ ಡಾ. ಲಕ್ಷ್ಮೀ ಪಾಟೀಲ ಮಾಕಾ, ಮೌಲ್ಯಮಾಪನ ಕುಲಸಚಿವ ಡಾ. ಎಸ್.ಎಚ್. ಹೊನ್ನಳ್ಳಿ, ಡೀನ್ ಡಾ. ಶಿವಕುಮಾರ ಜವಳಿಗಿ, ಪ್ರೊ. ನೀಲಾಂಬಿಕಾ ಶೇರಿಕಾರ ಸೇರಿದಂತೆ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಡೀನರು, ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.






