ಚುನಾವಣಾ ಆಯೋಗ, ಈಡಿ, ಸಿಬಿಐ ಬೆಂಬಲವಿಲ್ಲದೆ ಬಿಜೆಪಿ ಗೆಲ್ಲುವುದಿಲ್ಲ : ಸಚಿವ ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ
ಕಲಬುರಗಿ : ಚುನಾವಣಾ ಆಯೋಗ, ಈಡಿ, ಸಿಬಿಐ ಹಾಗೂ ಆರೆಸ್ಸೆಸ್ ಬೆಂಬಲವಿಲ್ಲದೆ ಚುನಾವಣೆ ಎದುರಿಸಿದರೆ ಬಿಜೆಪಿ ಎಲ್ಲಿಯೂ ಗೆಲ್ಲುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾರದರ್ಶಕವಾಗಿ ಚುನಾವಣೆ ನಡೆದರೆ ಬಿಜೆಪಿ ಗುಜರಾತ್ ಸೇರಿದಂತೆ ಯಾವುದೇ ರಾಜ್ಯದಲ್ಲೂ ಗೆಲ್ಲುವುದಿಲ್ಲ. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕೂಡ ಜಯಿಸುವುದಿಲ್ಲ ಎಂದು ಟೀಕಿಸಿದರು.
ಕೇಂದ್ರ ಸರಕಾರ ಚುನಾವಣಾ ಆಯೋಗವನ್ನು ತನ್ನ ಕೈಗೊಂಬೆಯನ್ನಾಗಿ ಮಾಡಿಕೊಂಡಿದೆ ಎಂದು ಆರೋಪಿಸಿದ ಅವರು, ಹಿಂದೆ ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸದಸ್ಯರಾಗಿದ್ದರು. ಆದರೆ, ಬಿಜೆಪಿ ಅವರನ್ನು ಹೊರಗಿಟ್ಟು ತನ್ನದೇ ಸಚಿವರನ್ನು ಸೇರಿಸಿಕೊಂಡಿದೆ. ಜೊತೆಗೆ ಆಯುಕ್ತರ ವಿರುದ್ಧ ನ್ಯಾಯಾಂಗ ಕ್ರಮ ಕೈಗೊಳ್ಳದಂತೆ ಕಾಯ್ದೆ ರೂಪಿಸಿ ಅಕ್ರಮಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಹೇಳಿದರು.
ರಾಜ್ಯಪಾಲರ ಕಚೇರಿಗಳು ಬಿಜೆಪಿ ಕಚೇರಿಗಳಾಗಿ ಮಾರ್ಪಟ್ಟಿವೆ ಎಂದು ಟೀಕಿಸಿದ ಅವರು, ತಮಿಳುನಾಡಿನ ರಾಜಕೀಯ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿ, ರಾಜ್ಯಪಾಲರು ಶಾಸಕಾಂಗದ ನಿರ್ಧಾರಗಳನ್ನು ವಾಪಸ್ ಕಳುಹಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ವಿರುದ್ಧವೂ ಪ್ರತಿಕ್ರಿಯಿಸದ ಅವರು, ಗ್ರಾಮ ಪಂಚಾಯತ್ ಚುನಾವಣೆಯನ್ನೂ ಗೆಲ್ಲದವರು ಆರೆಸ್ಸೆಸ್ ಚಡ್ಡಿ ಹೊತ್ತಿದ್ದಕ್ಕೆ ಇಂದು ಎಂಎಲ್ಸಿ ಸ್ಥಾನ ಪಡೆದಿದ್ದಾರೆ ಎಂದು ವ್ಯಂಗ್ಯವಾಡಿದರು.
ಈ ಸಂದರ್ಭದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರು ಜಗದೇವ ಗುತ್ತೇದಾರ, ಚಂದ್ರಿಕಾ ಪರಮೇಶ್ವರ್, ಪ್ರವೀಣ್ ಪಾಟೀಲ್ ಹರವಾಳ್, ಮಝಹರ್ ಆಲಂ ಖಾನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.






