ಬಿಜೆಪಿ ನಾಯಕರ ಯಾರ ಮಕ್ಕಳು ಆರೆಸ್ಸೆಸ್ ಚಡ್ಡಿ ಹಾಕಿದ್ದಾರೆ?: ಪ್ರಿಯಾಂಕ್ ಖರ್ಗೆ ಪ್ರಶ್ನೆ

ಕಲಬುರಗಿ: ಬಿಜೆಪಿ ನಾಯಕರ ಯಾರ ಮಕ್ಕಳು ಆರೆಸ್ಸೆಸ್ ಚಡ್ಡಿ ಹಾಕಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಛಲವಾದಿ ನಾರಾಯಣಸ್ವಾಮಿ ಅವರ ಮಕ್ಕಳು ಆರೆಸ್ಸೆಸ್ ಕಚೇರಿಗೆ ಹೋಗಿದ್ದಾರಾ? ನಾನು ಹಿಟ್ ಆ್ಯಂಡ್ ರನ್ ಮಾಡ್ತಾ ಇಲ್ಲ, ಆರೆಸ್ಸೆಸ್ ಬಗ್ಗೆ ನಾನು ಕೇಳಿದ ಪ್ರಶ್ನೆಗೆ ಸದನದಲ್ಲಿ ಸಹ ಬಿಜೆಪಿ ಉತ್ತರ ಕೊಟ್ಟಿಲ್ಲ ಎಂದರು.
ಪ್ರಿಯಾಂಕ್ ಖರ್ಗೆ ಅಪ್ಪ, ಇಂದಿರಾ ಅವರಿಂದಲೇ ಆರೆಸ್ಸೆಸ್ ಗೆ ಏನು ಮಾಡುವುದಕ್ಕೆ ಆಗಿಲ್ಲ ಎಂಬ ಛಲವಾದಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, 100 ವರ್ಷ ಪೂರೈಸಿದ ಆರೆಸ್ಸೆಸ್ ದೇಶದ ಜನರ ಏಳಿಗೆಗೆ 10 ಸಾಧನೆ ಏನು ಮಾಡಿದೆ ಹೇಳಲಿ, 52 ವರ್ಷ ಯಾಕೆ ತಮ್ಮ ಕಚೇರಿಯಲ್ಲಿ ರಾಷ್ಟ್ರ ಧ್ವಜ ಹಾರಿಸಲಿಲ್ಲ. ಅದಕ್ಕೆ ಉತ್ತರಿಸಲಿ. ದೇಶದ ಐಕ್ಯತೆ, ಜನರ ಅಭಿವೃದ್ಧಿ ಸಲುವಾಗಿ ಏನು ಮಾಡಿದೆ ಎನ್ನುವುದನ್ನೂ ತಿಳಿಸಲಿ ಎಂದ ಅವರು, ನಾರಾಯಣಸ್ವಾಮಿ ಅವರಿಗೆ ಅವರ ಇತಿಹಾಸವೇ ಗೊತ್ತಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ನಾರಾಯಣಸ್ವಾಮಿ ಅವರನ್ನು ನಮ್ಮ ನಾಲ್ಕು ಜನರನ್ನು ಬೈಯುವದಕ್ಕೆ ಇಟ್ಟಿದ್ದಾರೆ. ನಮಗೆ ಎಷ್ಟು ಬೈದಿದ್ದಾರೆ ಎಂಬುದು ಕೇಶವ ಕೃಪಾಗೆ ಮಾಹಿತಿ ಕೊಡಬೇಕು. ಎಲ್ಲಿಯವರೆಗೂ ನಮ್ಮನ್ನು ಬೈತಾರೆ ಅಲ್ಲಿಯವರೆಗೆ ಅವರು ಕುರ್ಚಿಯಲ್ಲಿ ಇರೋದು ಎಂದರು.
ಆರೆಸ್ಸೆಸ್ ರಾಜಕೀಯ ಪಕ್ಷ ಅಲ್ಲ, ರಾಜಕೀಯದಲ್ಲಿ ತರಬೇಡಿ ಅಂತಾ ಮುಖಂಡರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹಾಗಾದ್ರೆ ಆರೆಸ್ಸೆಸ್ ನವರು ಯಾಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಾಲ್ಕು ಜನರ ಹೆಸರು ಕಳಿಸಿದ್ರಿ? ಆರೆಸ್ಸೆಸ್ ನಾಯಕರೇ ಕರಾವಳಿಯಲ್ಲಿ ಶಾಸಕರಿದ್ದಾರೆ, ಆರೆಸ್ಸೆಸ್ ಯಾಕೆ ಬಿಜೆಪಿ ಪಕ್ಷದಲ್ಲಿ ಹಸ್ತಕ್ಷೇಪ ಮಾಡುತ್ತೆ ಎಂದ ಅವರು, ಒಂದು ಅಭಿಯಾನ ಮಾಡೋಣ, 'ಸೇಲ್ಫಿಸ್ ಇನ್ ಶಾಖಾ' ಅಂತಾ ಒಂದು ಅಭಿಯಾನ ಮಾಡೋಣ ಎಂದು ಟೀಕಿಸಿದರು.
ಆರೆಸ್ಸೆಸ್ ಬಗ್ಗೆ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಮೂರ್ಖರ ಹೇಳಿಕೆ ಅಂತಾ ವಿಜಯೇಂದ್ರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನ್ನ ಪ್ರಶ್ನೆಗೆ ಅವರ ಬಳಿ ಉತ್ತರ ಇದೆಯಾ? ಬಿಜೆಪಿಯ ಆರ್ಟಿಕಲ್ 02 ಅನ್ನು ಅವರು ಓದಿಕೊಳ್ಳಲಿ ಎಂದು ಹೇಳಿದರು.
ಖರ್ಗೆಯವರನ್ನು ಸಿಎಂ ಮಾಡುವುದಕ್ಕೆ ದಲಿತ ನಾಯಕರ ರಣತಂತ್ರ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಈ ಬಗ್ಗೆ ಖರ್ಗೆ ಸಾಹೇಬ್ರೆ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಸಿಎಂ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಕೂಡಾ ಹೇಳಿದ್ದಾರೆ, ಈಗ ಅದು ಮುಗಿದ ಅದ್ಯಾಯ ಎಂದರು.