ಬಿಜೆಪಿ ಕುಟುಂಬ ರಾಜಕಾರಣದಿಂದಲೇ 108 ಸ್ಥಾನದಿಂದ 69ಕ್ಕೆ ಕುಸಿದಿದೆ : ಕೆ.ಎಸ್ ಈಶ್ವರಪ್ಪ

ಕಲಬುರಗಿ: ರಾಜ್ಯದಲ್ಲಿ ಬಿಜೆಪಿಯಲ್ಲಿ ಕುಟುಂಬ ರಾಜಕಾರಣ, ಸಾಮೂಹಿಕ ನಾಯಕತ್ವದ ಕೊರತೆ ಹಾಗೂ ಸಂಘಟನಾ ದುರ್ಬಲತೆಯಿಂದಲೇ ವಿಧಾನಸಭಾ ಸದಸ್ಯರ ಸಂಖ್ಯೆ 108ರಿಂದ 69ಕ್ಕೆ ಇಳಿದಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ನಗರದ ಐವಾನ್ ಎ ಶಾಹಿ ಅತಿಥಿಗೃಹದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಾನು ಕುಟುಂಬ ರಾಜಕಾರಣದ ವಿರುದ್ಧ ಇದ್ದೇನೆ. ಒಂದೇ ಕುಟುಂಬದ ಪ್ರಭಾವದಿಂದ ವಿಧಾನಸಭೆಯಷ್ಟೇ ಅಲ್ಲ, ಲೋಕಸಭೆಯಲ್ಲಿಯೂ ಸದಸ್ಯರ ಸಂಖ್ಯೆ 27ರಿಂದ 15ಕ್ಕೆ ಇಳಿದಿದೆ” ಎಂದು ಹೇಳಿದರು.
“ನನ್ನ ರಕ್ತದಲ್ಲೇ ಬಿಜೆಪಿ ಇದೆ. ನಾನು ಹುಟ್ಟುತ್ತಲೇ ಆರೆಸ್ಸೆಸ್ ಪರಿವಾರದಲ್ಲಿ ಬೆಳೆದವನು. ಆ ಪರಿವಾರವನ್ನು ಬಿಟ್ಟು ಹೊರಬರುವುದು ಸಾಧ್ಯವಿಲ್ಲ. ಪ್ರಾಣ ಇರುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ. ಯಾವ ಪಕ್ಷಕ್ಕೂ ಹೋಗುವುದಿಲ್ಲ. ಪಕ್ಷ ಶುದ್ಧೀಕರಣಕ್ಕಾಗಿ ಹೊರಗಡೆ ಬಂದಿದ್ದೇನೆ” ಎಂದು ಹೇಳಿದರು. “ಅಖಿಲೇಶ್ ಯಾದವ್ ಹಾಗೂ ಕಾಂಗ್ರೆಸ್ ನಾಯಕರು ನನಗೂ ನನ್ನ ಮಗನಿಗೂ ಸ್ಥಾನ ನೀಡುವುದಾಗಿ ಆಹ್ವಾನಿಸಿದ್ದರೂ ನಾನು ಒಪ್ಪಿಕೊಂಡಿಲ್ಲ” ಎಂದರು.
ರಾಜ್ಯದ ಇತಿಹಾಸದಲ್ಲೇ ವಿಧಾನಸಭೆಯ ಸಭಾಧ್ಯಕ್ಷರು ಸದನದಿಂದ ಹೊರನಡೆದ ಘಟನೆ ಅಪರೂಪದದ್ದು. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಆಡಳಿತ ವೈಫಲ್ಯವನ್ನು ತೋರಿಸುತ್ತದೆ ಎಂದು ಅವರು ಆರೋಪಿಸಿದರು.
ಸದನದಲ್ಲಿ ಪ್ರಶ್ನೆಗಳಿಗೆ ಉತ್ತರಿಸಲು ಮಂತ್ರಿಗಳೇ ಇಲ್ಲದಿದ್ದರೆ ಹೌಸ್ ಏಕೆ ಬೇಕು? ಮಂತ್ರಿಗಳ ಗೈರುಹಾಜರಿಯಿಂದ ಬೇಸತ್ತು ಸ್ಪೀಕರ್ ಹೊರನಡೆದಿರುವುದು ರಾಜ್ಯಕ್ಕೆ ಅವಮಾನಕಾರಿ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆರೆಸ್ಸೆಸ್ ನಿಷೇಧ ಅಸಾಧ್ಯ :
ಭಾರತದ ಆಂತರಿಕ ವಿಷಯಗಳಲ್ಲಿ ಅಮೆರಿಕಾ ಹಸ್ತಕ್ಷೇಪ ಮಾಡುತ್ತಿರುವುದು ಸರಿಯಲ್ಲ. ಆರೆಸ್ಸೆಸ್ ಎಂದಿಗೂ ಧರ್ಮ ಅಥವಾ ವ್ಯಕ್ತಿಗಳ ವಿರುದ್ಧ ಗಲಾಟೆ ಮಾಡಿಲ್ಲ. ಕಳೆದ ನೂರು ವರ್ಷಗಳಿಂದ ದೇಶಾದ್ಯಂತ ಶಾಂತಿಯುತವಾಗಿ ದೇಶಭಕ್ತಿ ಜಾಗೃತಿ ಮೂಡಿಸುತ್ತಿರುವ ಸಂಘಟನೆಯನ್ನು ನಿಷೇಧಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
“ರಾಜ್ಯದ ಮುಂಬರುವ ಉಪಚುನಾವಣೆಗಳಲ್ಲಿ ನಾನು ಯಾವುದೇ ನಿರ್ದಿಷ್ಟ ಪಕ್ಷದ ಪರವಾಗಿ ಪ್ರಚಾರ ಮಾಡುವುದಿಲ್ಲ. ಆದರೆ ಹಿಂದುತ್ವವನ್ನು ಬೆಂಬಲಿಸುವ ಪಕ್ಷಕ್ಕೆ ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡುತ್ತೇನೆ.”
-ಕೆ.ಎಸ್. ಈಶ್ವರಪ್ಪ, ಮಾಜಿ ಡಿಸಿಎಂ







