ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ: ಬಿ.ಎಸ್. ಯಡಿಯೂರಪ್ಪ

ಕಲಬುರಗಿ: ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿ ಚುನಾವಣೆ ಎದುರಿಸಲಿವೆ. ಈ ಮೈತ್ರಿಯಿಂದ ಹೆಚ್ಚಿನ ಸ್ಥಾನಗಳನ್ನು ಗೆದ್ದು ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಎರಡೂ ಪಕ್ಷಗಳು ಒಗ್ಗಟ್ಟಿನಿಂದ ಚುನಾವಣೆ ಎದುರಿಸಲಿವೆ ಎಂದು ಹೇಳಿದರು.
ಈಶಾನ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶಿಲ್ ನಮೋಶಿ ಅವರ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಕಲಬುರಗಿಗೆ ಆಗಮಿಸಿದ್ದ ಯಡಿಯೂರಪ್ಪ, ರಾಜ್ಯದ ಶಿಕ್ಷಣ ವ್ಯವಸ್ಥೆ ಸೇರಿದಂತೆ ಹಲವು ವಿಚಾರಗಳ ಕುರಿತು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಶಿಕ್ಷಕರ ಹಲವು ಹುದ್ದೆಗಳು ಖಾಲಿ ಉಳಿದಿವೆ. ಶಿಕ್ಷಕರು ಹಾಗೂ ಅಧ್ಯಾಪಕರಿಗೆ ವೇತನ ಸರಿಯಾಗಿ ದೊರೆಯುತ್ತಿಲ್ಲ. ಮಕ್ಕಳಿಗೆ ನೀಡುವ ಶೂ ಮತ್ತು ಸಾಕ್ಸ್‌ಗಳಲ್ಲೂ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ ಅವರು, ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಈಶಾನ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶಿಲ್ ನಮೋಶಿ ಅವರಿಗೆ ಬೆಂಬಲ ನೀಡುವಂತೆ ಶಿಕ್ಷಕರಲ್ಲಿ ಮನವಿ ಮಾಡಿದ ಯಡಿಯೂರಪ್ಪ, ಶಿಕ್ಷಕರ ಸಮಸ್ಯೆಗಳನ್ನು ವಿಧಾನ ಪರಿಷತ್ತಿನಲ್ಲಿ ಪರಿಣಾಮಕಾರಿಯಾಗಿ ಪ್ರಸ್ತಾಪಿಸಲು ತಮ್ಮ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಹೇಳಿದರು.
ರೈತರಿಗೆ ನೀಡುವುದಾಗಿ ಹೇಳಿದ್ದ 2,500 ರೂ. ಎಲ್ಲಿ?
ರೈತರಿಗೆ 2,500 ರೂ. ನೀಡುವುದಾಗಿ ಕಾಂಗ್ರೆಸ್ ಸರ್ಕಾರ ಹೇಳಿತ್ತು. ಆದರೆ ಇದುವರೆಗೆ ನಯಾಪೈಸೆಯನ್ನೂ ನೀಡಿಲ್ಲ ಎಂದು ಯಡಿಯೂರಪ್ಪ ಅವರು ಆರೋಪಿಸಿದರು.
ಸಿಎಂ ಡಿ.ಕೆ.ಶಿವಕುಮಾರ್ ಅವರು ಹಣಬಲದ ಮೇಲೆ ಚುನಾವಣೆ ಗೆಲ್ಲಬಹುದು ಎಂಬ ವಿಶ್ವಾಸದಲ್ಲಿದ್ದಾರೆ. ಹಣಬಲದ ಜತೆಗೆ ಜಾತಿ-ಜಾತಿಗಳ ನಡುವೆ ಸಂಘರ್ಷ ಸೃಷ್ಟಿಸಿ ಚುನಾವಣೆ ಗೆಲ್ಲಲು ಕಾಂಗ್ರೆಸ್ ಮುಂದಾಗಿದೆ ಎಂದು ಅವರು ಆರೋಪಿಸಿದರು.
2028ರ ವಿಧಾನಸಭಾ ಚುನಾವಣೆಯ ಬಳಿಕ ತಾನೇ ಮುಖ್ಯಮಂತ್ರಿ ಆಗುವುದಾಗಿ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಯಡಿಯೂರಪ್ಪ, ಡಿ.ಕೆ.ಶಿವಕುಮಾರ್ ಅವರು ಹಣಬಲದ ಮೂಲಕ ಅಧಿಕಾರಕ್ಕೆ ಬರಲು ಕನಸು ಕಂಡಿದ್ದಾರೆ. ಮುಂದೆ ಯಾರ ಕೈಗೆ ಅಧಿಕಾರ ನೀಡಲಿದ್ದಾರೆ ಎನ್ನುವುದು ಜನರು ತೀರ್ಮಾನ ಮಾಡುತ್ತಾರೆ; ಹಣದ ಮದದಲ್ಲಿರುವವರು ಅಲ್ಲ ಎಂದು ಹೇಳಿದರು.
ಬಿಜೆಪಿ-ಜೆಡಿಎಸ್ ಮೈತ್ರಿ ಅಧಿಕಾರಕ್ಕೆ ಬಂದರೆ ಕುಮಾರಸ್ವಾಮಿ ಅವರು ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಬಿಜೆಪಿ-ಜೆಡಿಎಸ್ ಮೈತ್ರಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಸಿಎಂ ಯಾರನ್ನು ಮಾಡಬೇಕು ಎನ್ನುವುದು ಮೈತ್ರಿಕೂಟದ ನಾಯಕರು ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಪೈಲಟ್ ಸ್ಮಿತ್‌ಗೆ ಭಾರತ ರತ್ನ ನೀಡುವಂತೆ ಮನವಿ:
ದೇಶದ ಹೆಮ್ಮೆಯ ಪೈಲಟ್ ಸ್ಮಿತ್ ಮಚ್ಚರ ಅವರಿಗೆ ಭಾರತ ರತ್ನ ನೀಡಬೇಕು ಎಂಬುದು ತಮ್ಮ ಅಭಿಪ್ರಾಯವಾಗಿದ್ದು, ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಮನವಿ ಮಾಡುವುದಾಗಿ ಯಡಿಯೂರಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎನ್.ಡಿ.ಎ ಒಕ್ಕೂಟದ ಅಭ್ಯರ್ಥಿ, ಹಾಲಿ ಎಂಎಲ್ಸಿ ಶಶೀಲ್ ನಮೋಶಿ, ಬಂಡೆಪ್ಪ ಖಾಶೆಂಪುರ್, ಬಸವರಾಜ ಮತ್ತಿಮಡು, ಸುನೀಲ್ ವಲ್ಯಪುರೆ, ಅವಿನಾಶ್ ಜಾಧವ್, ಬಿ.ಜಿ ಪಾಟೀಲ್, ಜಗದೇವ ಗುತ್ತೇದಾರ್, ನಾಸೀರ್ ಹುಸೇನ್ ಉಸ್ತಾದ್, ರಾಜಕುಮಾರ ಪಾಟೀಲ್, ನಿತಿನ್ ಗುತ್ತೇದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.






