"ಆರೆಸ್ಸೆಸ್ ಕಾರ್ಯಕರ್ತರು ನಿಮ್ಮ ಮನೆತನಕ ಬರಬಹುದು ಹುಷಾರ್..": ಪ್ರಿಯಾಂಕ್ ಖರ್ಗೆಗೆ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಎಚ್ಚರಿಕೆ

ಕಲಬುರಗಿ: ಮಾತೆತ್ತಿದರೆ ಆರೆಸ್ಸೆಸ್ ನಿಷೇಧ ಮಾಡುವುದಾಗಿ ಹೇಳುತ್ತಿರುವ ಸಚಿವ ಪ್ರಿಯಾಂಕ್ ಖರ್ಗೆಗೆ ಅವರಿಗೆ ನಿನ್ನೆ ಬೆದರಿಕೆ ಕರೆ ಬಂದಿರಬಹುದು, ಆದರೆ ನಾಳೆ ಆರೆಸ್ಸೆಸ್ ಕಾರ್ಯಕರ್ತರು ನಿಮ್ಮ ಮನೆ ತನಕ ಬರಬಹುದು ಹುಷಾರಾಗಿರಿ ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೆಸ್ಸೆಸ್ ನಿಷೇಧ ಮಾಡಬೇಕೆಂದು ಹೇಳಿಕೆ ನೀಡುವ ಸಚಿವರಿಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ. ಸ್ವತಃ ಸಚಿವರೇ ಕಲಬುರಗಿ ಜಿಲ್ಲೆಯಲ್ಲಿ ಹಲವು ಉಲ್ಲಂಘನೆ ಮಾಡಿದ್ದಾರೆ. ಎಸ್ಪಿ ಕಚೇರಿ ಸಮೀಪ ಬಿ.ಆರ್ ಅಂಬೇಡ್ಕರ್ ಸ್ಮಾರಕ ಸಮಿತಿ ಮಾಡಿ, ಅಲ್ಲಿ ಕಲ್ಯಾಣ ಮಂಟಪ ನಿರ್ಮಿಸಲಾಗಿದೆ. ಅದನ್ನು ದುರುಪಯೋಗಪಡಿಸಿ, ಕರ್ನಾಟಕ ಪೀಪಲ್ ಎಜುಕೇಶನ್ ಸೊಸೈಟಿ ಮಾಡಿದ್ದೀರಿ ಎಂದು ಆರೋಪಿಸಿದರು.
ಪಾಲಿ ಮತ್ತು ಸಂಸ್ಕೃತಿ ಸಂಸ್ಥೆ ತೆರೆದು 10 ರಿಂದ 15 ವರ್ಷ ಆಯಿತು. ಸಂಸ್ಥೆಯಲ್ಲಿ 10 ಹುಡುಗರು ಸರ್ಟಿಫಿಕೇಟ್ ಕೊಟ್ಟಿಲ್ಲ. 12 ಎಕರೆಯನ್ನು ಖಾಲಿ ಬಿಟ್ಟು ಅಲ್ಲಿ ಸರ್ಕಾರದಿಂದ ನೂರಾರು ಕೋಟಿ ಬಜೆಟ್ ಎತ್ತಿಕೊಂಡು ದೊಡ್ಡ ಬಂಗಲೆ ಕಟ್ಟಿಸಿಕೊಂಡಿದ್ದೀರಿ, ಇದರಿಂದ ಯಾರಿಗೂ ಲಾಭವಾಗಿಲ್ಲ ಎಂದು ದೂರಿದರು.
ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ವೀಡಿಯೊ ಹರಿಬಿಟ್ಟಿದ್ದೀರಿ. ಮೊದಲು ನಿಮ್ಮ ಬಾಯಿಯನ್ನು ಚೆನ್ನಾಗಿ ಇಟ್ಟುಕೊಳ್ಳಿ, ಈ ಹಿಂದೆ ವಾಡಿಯಲ್ಲಿ ಮಾತನಾಡಿ, ʼಕೇವಲ ಚಿತ್ತಾಪುರದಲ್ಲಿ ಇಲ್ಲ, ಇಡೀ ಕಲಬುರಗಿಯಲ್ಲೇ ಒಬ್ಬ ಬಿಜೆಪಿ ಕಾರ್ಯಕರ್ತರನ್ನು ತಿರುಗಾಡಲು ಬಿಡಲ್ಲʼ ಎಂದು ಹೇಳಿದ್ದೀರಿ, ಇದು ಬೆದರಿಕೆ ಅಲ್ಲವೇ ಎಂದು ಪ್ರಶ್ನಿಸಿದರು.
ಇವತ್ತು ಫೋನ್ ಕರೆ ಬಂದಿರಬಹುದು, ನಾಳೆ ನಿಮ್ಮ ಮನೆತನಕ ಬರಬಹುದು, ತಾವು ಹುಷಾರಾಗಿರಿ, ಇದೆಲ್ಲ ಬಿಟ್ಟು ಆರೆಸ್ಸೆಸ್ ಗೆ ಕ್ಷಮೆಯಾಚಿಸಿ ಎಂದು ಆಗ್ರಹಿಸಿದ್ದಾರೆ.







