ಕಲಬುರಗಿ ಜಿಲ್ಲಾಧಿಕಾರಿ ವಿರುದ್ಧ ಬಿಜೆಪಿ ನಾಯಕ ಎನ್.ರವಿಕುಮಾರ್ ಅವಹೇಳನಕಾರಿ ಹೇಳಿಕೆ : ಜನವಾದಿ ಸಂಘಟನೆ ಖಂಡನೆ

ಮೀನಾಕ್ಷಿ ಬಾಳಿ, ಕೆ.ನೀಲಾ
ಕಲಬುರಗಿ: ಕಲಬುರಗಿ ಜಿಲ್ಲಾಧಿಕಾರಿ ಪಾಕಿಸ್ತಾನದಿಂದ ಬಂದಂತೆ ಕಾಣುತ್ತಿದೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಭಾರತ ಜನವಾದಿ ಮಹಿಳಾ ಸಂಘಟನೆ ಖಂಡಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂಘಟನೆಯ ಪದಾಧಿಕಾರಿಗಳು, ಬಿಜೆಪಿಯ ಎಂಎಲ್ಸಿಯಾಗಿರುವ ಎನ್.ರವಿಕುಮಾರ್ ಅವರು ಕಲಬುರಗಿಯಲ್ಲಿ ಅವರ ಪಕ್ಷದವರು ಹಮ್ಮಿಕೊಂಡಿದ್ದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತ ತಮ್ಮ ನಾಲಿಗೆಯನ್ನು ಕೋಮುಪ್ರಚೋದನಾತ್ಮಕವಾಗಿ ಹರಿಬಿಟ್ಟಿದ್ದಾರೆ. ಈ ಡಿಸಿ ಕಚೇರಿ ಕೂಡ ಸ್ವಾತಂತ್ರ ಕಳೆದುಕೊಂಡು ಬಿಟ್ಟಿದೆ, ಇಲ್ಲಿನ ಡಿಸಿ ಮೇಡಂ ಪಾಕಿಸ್ತಾನದಿಂದ ಬಂದಂತೆ ತೋರುತ್ತದೆ ಎಂದು ಅತ್ಯಂತ ಬೇಜವಾಬ್ದಾರಿ ಮಾತುಗಳನ್ನಾಡಿದ್ದಾರೆ ಇಂತಹ ಹೇಳಿಕೆಗಳನ್ನು ಭಾರತ ಜನವಾದಿ ಮಹಿಳಾ ಸಂಘಟನೆ ಸಹಿಸುವುದಿಲ್ಲ ಎಂದಿದ್ದಾರೆ.
ಅಧಿಕಾರಿಗಳ ಜಾತಿ, ಧರ್ಮಗಳನ್ನು ಪರಿಗಣಿಸಿ, ಈ ರೀತಿಯ ಹೇಳಿಕೆ ನೀಡುವುದು ಬಿಜೆಪಿಗೆ ರಕ್ತಗತವಾಗಿದೆ. ದೇಶದ ಹೆಮ್ಮೆಯ ಮಗಳು ಕರ್ನಲ್ ಸೋಫಿಯಾ ಅವರನ್ನು ಭಯೋತ್ಪಾದಕರ ಸಹೋದರಿ ಎಂದು ಹೇಳಿ ತನ್ನ ನೀಚತನ ಪ್ರದರ್ಶಿಸಿದ್ದಾರೆ. ಹೀಗೆ ಮಹಿಳೆಯರನ್ನು ಅವಮಾನಿಸುವುದೇ ಬಿಜೆಪಿಯವರ ಸಾಧನೆಯಾಗಿದೆ. ಈ ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಸಂಘಟನೆಯ ಅಧ್ಯಕ್ಷ ಮೀನಾಕ್ಷಿ ಬಾಳಿ, ಉಪಾಧ್ಯಕ್ಷೆ ಕೆ.ನೀಲಾ , ಕಾರ್ಯದರ್ಶಿ ದೇವಿ ಸೇರಿದಂತೆ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.







