ಬಿಜೆಪಿಗರು ತಮ್ಮ ಮಕ್ಕಳನ್ನು ಸೇರಿಸಿಕೊಂಡು ʼಮದ್ದೂರು ಚಲೋʼ ಮಾಡಲಿ: ಸಚಿವ ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ
ಕಲಬುರಗಿ : ಬಿಜೆಪಿಗರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಡವರ ಮಕ್ಕಳನ್ನು ಸೇರಿಸಿಕೊಂಡು ಆ ಚಲೋ, ಈ ಚಲೋ ಮಾಡುತ್ತಿದ್ದಾರೆ. ಇವರು ವಿದೇಶದಲ್ಲಿ ಓದಲು ಬಿಟ್ಟಿರುವ ತಮ್ಮ ಮಕ್ಕಳನ್ನು ವಾಪಸ್ ಕರೆಸಿಕೊಂಡು ಮದ್ದೂರಿನಲ್ಲಿ ಬೀದಿಗಿಳಿಯಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ನಗರದಲ್ಲಿ ಮಧ್ಯದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ಈಗ ಮಂಗಳೂರಿನಿಂದ ಮದ್ದೂರಿಗೆ ಶಿಫ್ಟ್ ಆಗಿದ್ದಾರೆ. ಅವರಿಗೆ ಈಗ ಮಾಡಲು ಏನೂ ಕೆಲಸವಿಲ್ಲ. ಹಾಗಾಗಿ ಇದೆಲ್ಲ ಮಾಡುತ್ತಿದ್ದಾರೆ. ಮದ್ದೂರು ಘಟನೆಗೆ ಸಂಬಂಧಿಸಿದಂತೆ 22 ಜನರನ್ನು ಬಂಧನ ಮಾಡಲಾಗಿದೆ. ತನಿಖೆಯೂ ನಡೆಯುತ್ತಿದೆ. ಶಾಂತಿ ಸಭೆ ಕರೆಯಲಾಗಿತ್ತು. ಆದರೆ ಆ ಸಭೆಗೆ ಬಿಜೆಪಿ ನಾಯಕರು ಯಾಕೆ ಭಾಗವಹಿಸಲಿಲ್ಲ ಎಂದು ಪ್ರಶ್ನಿಸಿದರು.
ಭದ್ರಾವತಿ ಶಾಸಕ ಸಂಗಮೇಶ್ ಹೇಳಿಕೆಯು 20 ವರ್ಷ ಹಿಂದಿನದು ಎಂದು ಅವರೇ ಹೇಳಿದ್ದಾರೆ. ಸಂಗಮೇಶ್ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಈ ಹಿಂದೆ ಇದೇ ತರಹದ ಹೇಳಿಕೆ ನೀಡಿದ್ದ ದೇವೇಗೌಡ ಹಾಗೂ ಕುಮಾರಸ್ವಾಮಿ ಬಗ್ಗೆ ಏನು ಹೇಳುತ್ತಾರೆ ಎಂದು ತಿರುಗೇಟು ನೀಡಿದರು.
ಭಾರತ- ಪಾಕಿಸ್ತಾನ ಪಂದ್ಯ ಆಡಿಸುತ್ತಿರುವುದೇಕೆ?:
ಪಾಕಿಸ್ತಾನದ ಕುಮ್ಮಕ್ಕಿನಿಂದ ಪಹಲ್ಗಾಮ್ ದಾಳಿ ನಡೆದಿದೆ ಎಂದು ಗೊತ್ತಿದ್ದರೂ, ಇವರು ಭಾರತ-ಪಾಕಿಸ್ತಾನ ಪಂದ್ಯ ಆಡಿಸುತ್ತಿದ್ದಾರೆ. ದೇಶ ಭಕ್ತಿ ಇದ್ದರೆ ಪಂದ್ಯ ರದ್ದು ಮಾಡಲಿ ಎಂದ ಅವರು, ಇರಲಾರದ ಕೆಲಸಕ್ಕೆ ಕೋರ್ಟ್ ಗೆ ಹೋಗುವ ಇವರು ನಮ್ಮ ರಾಜ್ಯಕ್ಕೆ ಬರಬೇಕಾದ ಪಾಲು ಕೇಳಲು ಹೋಗಿಲ್ಲ, ಅಭಿವೃದ್ಧಿ ಕೆಲಸಗಳಿಗೆ ಕೈ ಜೋಡಿಸುವುದಿಲ್ಲ. ಇತ್ತ ಧರ್ಮಸ್ಥಳವನ್ನು ಬೆಂಬಲಿಸಿ ಧರ್ಮಸ್ಥಳ ಚಲೋ ಮಾಡುತ್ತಾರೆ, ಇನ್ನೊಂದೆಡೆ ಸೌಜನ್ಯ ಮನೆಗೆ ಹೋಗುತ್ತಾರೆ. ಎರಡು ಕಡೆಗಳಲ್ಲಿ ಬಣ್ಣ ಹಚ್ಚುವ ಇವರು ಬೋಗಸ್ ಪ್ರತಿಮೆ ನಿರ್ಮಾಣ ಮಾಡಿ ನಮಗೆ ಪಾಠ ಹೇಳಲು ಬರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಡಗಂಚಿಯ ಕೇಂದ್ರೀಯ ವಿದ್ಯಾಲಯ ಆರೆಸ್ಸೆಸ್ ಶಾಖಾ ಕಚೇರಿಯಾಗಿದೆ. ವಿವಿ ಕಟ್ಟಲು ಜಾಗ ಕೊಟ್ಟಿರುವುದು ನಾವು, ಆದರೆ, ನಮ್ಮನ್ನೇ ವಿವಿ ವ್ಯಾಪ್ತಿಯಿಂದ ಹೊರಗಡೆ ಇಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ಡಾ.ಅಜಯ್ ಸಿಂಗ್ ಮಾತನಾಡಿ, ಬಿಜೆಪಿಯವರು ಜನರ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಗ್ಯಾರಂಟಿ ಯಶಸ್ವಿಯಾಗಿರುವುದನ್ನು ಕಂಡು ಸಣ್ಣ ವಿಷಯಗಳನ್ನೂ ದೊಡ್ಡದಾಗಿ ಬಿಂಬಿಸಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇವರು ಏನೇ ಮಾಡಿದರೂ ಜನರು ಈಗಲೂ, ಮುಂದೆಯೂ ಅವರಿಗೆ ಆಶೀರ್ವಾದ ಮಾಡಲ್ಲ ಎಂದು ತಿಳಿಸಿದರು.







