ಬಿಜೆಪಿ ಶಾಸಕ ಬಸವರಾಜ ಮತ್ತಿಮಡು ಪುತ್ರನ ವಿರುದ್ಧ ಅಕ್ರಮ ಕಲ್ಲು ಗಣಿಗಾರಿಕೆ ಆರೋಪ: ಲೋಕಾಯುಕ್ತರಿಗೆ ದೂರು

ಕಲಬುರಗಿ: ಕಲಬುರಗಿ ತಾಲೂಕಿನ ಕೆರೂರ ಗ್ರಾಮದಲ್ಲಿ ಬಿಜೆಪಿ ಶಾಸಕ ಬಸವರಾಜ ಮತ್ತಿಮಡು ಅವರ ಪುತ್ರ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಜೈಭೀಮ್ ಜೈ ಸಂವಿಧಾನ ಬಚಾವೋ ಸಂಘದ ಅಧ್ಯಕ್ಷ ರಾಮ ರಾಠೋಡ್ ಅವರು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ಮತ್ತಿಮಡು ಅವರ ಪುತ್ರ ಆಕಾಶ ಬಸವರಾಜ ಮತ್ತಿಮಡು ಹೆಸರಿನಲ್ಲಿರುವ ಜಮೀನಿನಲ್ಲಿ ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 5ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರಿದಿದೆ. ಈ ಬಗ್ಗೆ ನ್ಯಾಯಾಲಯ ಹಾಗೂ ಲೋಕಾಯುಕ್ತ ಪ್ರಕರಣಗಳು ಬಾಕಿ ಇದ್ದರೂ ಸಹ ಜಮೀನನ್ನು ವಿವಿಧ ವ್ಯಕ್ತಿಗಳ ಹೆಸರಿಗೆ ಮಾರಾಟ ಮತ್ತು ವರ್ಗಾವಣೆ ಮಾಡಿರುವುದು ಕಾನೂನುಬಾಹಿರವಾಗಿದೆ ಎಂದು ಹೇಳಿದ್ದಾರೆ.
ಮೊದಲಿಗೆ ಆಕಾಶ ಬಸವರಾಜ ಮತ್ತಿಮಡು ಹೆಸರಿನಲ್ಲಿದ್ದ ಜಮೀನನ್ನು ಅತೀಕ್ ಪಾಶಾ ಜುನೇದಿ ಅವರಿಗೆ ಮಾರಾಟ ಮಾಡಲಾಗಿದ್ದು, ನಂತರ ಅದನ್ನು ಸೋಮಶೇಖರ ಬಸವರಾಜ ಮೇತ್ರಿ ಅವರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಈ ಜಮೀನು ವರ್ಗಾವಣೆ ಪ್ರಕ್ರಿಯೆಯಲ್ಲಿ ನೋಂದಣಿ ಅಧಿಕಾರಿಗಳ ಸಹಕಾರವೂ ಇದ್ದು, ಅವರ ಮೇಲೂ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಮ ಬಾಬು ರಾಠೋಡ ಒತ್ತಾಯಿಸಿದ್ದಾರೆ.
ಇದಲ್ಲದೆ, ಈ ಕುರಿತು ಸಂಬಂಧಪಟ್ಟ ಸಚಿವರಿಗೆ ಈಗಾಗಲೇ ಲಿಖಿತ ದೂರು ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪೊಲೀಸ್ ಇಲಾಖೆ ಕೂಡ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿರುವ ಅವರು, “ರಾಜಕಾರಣಿಗಳಿಗೆ ಒಂದು ನ್ಯಾಯ, ಸಾಮಾನ್ಯ ಜನರಿಗೆ ಮತ್ತೊಂದು ನ್ಯಾಯವೇ?” ಎಂದು ಪ್ರಶ್ನಿಸಿದ್ದಾರೆ.






