ಕಲಬುರಗಿ | ಸೆ. 17ರಂದು ಬಿಜೆಪಿ ಕಚೇರಿ ಉದ್ಘಾಟನೆ: ಹರ್ಷನಂದ ಎಸ್. ಗುತ್ತೇದಾರ

ಕಲಬುರಗಿ: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಿಕಾರಿಪುರದ ಶಾಸಕ ಬಿ.ವೈ. ವಿಜಯೇಂದ್ರ ಸೆಪ್ಟೆಂಬರ್ 17ರಂದು ಆಳಂದಕ್ಕೆ ಆಗಮಿಸಿ ಹಲವು ಪ್ರಮುಖ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷನಂದ ಎಸ್. ಗುತ್ತೇದಾರ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 11:00 ಗಂಟೆಗೆ ಆಳಂದ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಭಾರತೀಯ ಜನತಾ ಪಕ್ಷದ ಕಚೇರಿಯನ್ನು ಉದ್ಘಾಟನೆ ಮಾಡಲಿದ್ದು, ನಂತರ ಮಧ್ಯಾಹ್ನ ಮಾಜಿ ಶಾಸಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ ದಿ. ಅಣ್ಣಾರಾವ ವೀರಭದ್ರಪ್ಪ ಪಾಟೀಲ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಾಯಂಕಾಲ ಶ್ರೀರಾಮ ಮಾರುಕಟ್ಟೆ ಆವರಣದಲ್ಲಿ ಹಿಂದೂ ಮಹಾಗಣಪತಿಯ ದಶಮಾನೋತ್ಸವ ಹಾಗೂ ಬೃಹತ್ ಹಿಂದೂ ಸಮಾವೇಶದಲ್ಲಿ ಪಾಲ್ಗೊಂಡು ಭಾಷಣ ಮಾಡುವರು. ಈ ಸಮಾವೇಶದಲ್ಲಿ ಗದಗದ ಜಗದ್ಗುರು ಸದಾಶಿವ ಮಹಾಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ.
ಇದರ ಭಾಗವಾಗಿ, ಶನಿವಾರ ಬೆಂಗಳೂರಿನಲ್ಲಿ ಗುತ್ತೇದಾರ ನೇತೃತ್ವದ ನಿಯೋಗ ವಿಜೇಯೇಂದ್ರರನ್ನು ಭೇಟಿ ಮಾಡಿ ಆಹ್ವಾನ ಪತ್ರಿಕೆ ಸಲ್ಲಿಸಿ ಆಹ್ವಾನ ನೀಡಿತು. ನಿಯೋಗದಲ್ಲಿ ಆಳಂದ ಮಂಡಲ ಬಿಜೆಪಿ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ಮುಖಂಡರು ಮಹೇಶ ಗೌಳಿ ಮತ್ತು ಶಿವಪ್ರಕಾಶ ಹೀರಾ ಇದ್ದರು.







