ಆಳಂದ ಪುರಸಭೆ ಎದುರು ಬಿಜೆಪಿ ಪ್ರತಿಭಟನೆ

ಆಳಂದ : ಪಟ್ಟಣದ ರಸ್ತೆ ಅಗಲೀಕರಣ ಕಾಮಗಾರಿಯಿಂದ ಆಸ್ತಿ ಕಳೆದುಕೊಂಡು ನಿರಾಶ್ರಿತರಾಗಿರುವ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಸರ್ಕಾರದಿಂದ ಪರ್ಯಾಯ ನಿವೇಶನಗಳನ್ನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಭಾರತೀಯ ಜನತಾ ಪಕ್ಷದ ವತಿಯಿಂದ ಬುಧವಾರ ಆಳಂದ ಪುರಸಭೆ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಬಿಜೆಪಿ ಮುಖಂಡರು, ರಸ್ತೆ ಅಗಲೀಕರಣದ ನೆಪದಲ್ಲಿ ತಲೆಮಾರುಗಳಿಂದ ವಾಸಿಸುತ್ತಿರುವ ಜನರ ಸ್ವಂತ ಆಸ್ತಿಗಳನ್ನು ಯಾವುದೇ ಪೂರ್ವ ನೋಟಿಸ್ ನೀಡದೇ ತೆರವುಗೊಳಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಲವರು ವರ್ಷಗಳಿಂದ ಪುರಸಭೆಗೆ ತೆರಿಗೆ ಪಾವತಿಸಿಕೊಂಡು ಬಂದಿದ್ದು, ಇಂತಹ ಕುಟುಂಬಗಳನ್ನು ಏಕಾಏಕಿ ಮನೆಗಳಿಂದ ಹೊರಹಾಕುವುದು ಅಮಾನುಷ ಕ್ರಮವಾಗಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಅಶೋಕ್ ಬಗಲಿ, ಬಿಜೆಪಿ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ವಿ. ಕಂದಗುಳೆ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಹರ್ಷಾ ಎಸ್. ಗುತ್ತೇದಾರ್, ಪಕ್ಷದ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಹಾದಿಮನಿ, ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಮನೆ, ಸೀತಾರಾಮ್ ಜಮಾದಾರ್, ಮಹೇಶ್ ಗೌಳಿ, ಬಸವರಾಜ್ ಹತ್ತರಕಿ, ಶಿವಪುತ್ರ ನಡಿಗೇರಿ, ನ್ಯಾಯವಾದಿ ಬಾಬಾಸಾಹೇಬ್ ಪಾಟೀಲ್, ಗೌರಿ ಚಿಟ್ಕೋಟಿ, ಚಂದ್ರಶೇಖರ್ ಹಿರೇಮಠ, ವೀರಣ್ಣ ಮಂಗಣಿ ಸೇರಿದಂತೆ ಅನೇಕ ಹಿರಿಯ–ಕಿರಿಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನೆ ಬಳಿಕ ಈ ಸಂಬಂಧ ಮುಖ್ಯಮಂತ್ರಿಗಳಿಗೆ ಬರೆದ ಮನವಿಪತ್ರವನ್ನು ಪುರಸಭೆ ಮುಖ್ಯ ಅಧಿಕಾರಿ ಸಂಗಮೇಶ್ ಪನ್‌ಶೆಟ್ಟಿ ಅವರ ಮೂಲಕ ಸಲ್ಲಿಸಲಾಯಿತು. ಒಂದು ವಾರದೊಳಗೆ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಸೇರಿದಂತೆ ಉಗ್ರ ಸ್ವರೂಪದ ಹೋರಾಟ ಕೈಗೊಳ್ಳಲಾಗುವುದು ಎಂದು ಬಿಜೆಪಿ ಮುಖಂಡರು ಎಚ್ಚರಿಕೆ ನೀಡಿದರು.







