ಬಡವರಿಗಾಗಿ ತಂದ ಕಾನೂನುಗಳ ಸರ್ವನಾಶ ಮಾಡುವುದೇ ಬಿಜೆಪಿ ಸಾಧನೆ : ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: "ಬಡವರ ಹಿತದೃಷ್ಟಿಗಾಗಿ ಜಾರಿಗೊಳಿಸಿದ ಕಾನೂನುಗಳನ್ನು ಒಂದೊಂದಾಗಿ ನಾಶಪಡಿಸುವುದೇ ಕೇಂದ್ರದಲ್ಲಿರುವ ಬಿಜೆಪಿ ಸರಕಾರದ ದೊಡ್ಡ ಸಾಧನೆಯಾಗಿದೆ" ಎಂದು ರಾಜ್ಯಸಭಾ ವಿರೋಧ ಪಕ್ಷದ ನಾಯಕರೂ ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ನಗರದಲ್ಲಿರುವ ತಮ್ಮ ನಿವಾಸದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದ ರೈತ, ಕೃಷಿ ಕಾರ್ಮಿಕ, ಬಡವರ ಪರವಾಗಿ ಜಾರಿಗೆ ತಂದಿರುವ ಮನರೇಗಾದಂತಹ ಯೋಜನೆಗಳ ಹೆಸರು ದಿಢೀರ್ ಬದಲಾವಣೆ ಮಾಡುವ ಮೂಲಕ ಅವರನ್ನು ಕೊಲೆ ಮಾಡಿದ್ದಾರೆ ಎಂದು ಹೇಳುವುದರಲ್ಲಿ ತಪ್ಪಿಲ್ಲ ಎಂದರು.
ಯುಪಿಎ ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ಮನರೇಗಾ ಯೋಜನೆ ವಿಶ್ವದಾದ್ಯಂತ ಹೆಸರು ಪಡೆದಿತ್ತು. ಅದರ ಹೆಸರನ್ನೂ ಒಮ್ಮಿಂದೊಮ್ಮೆ ಬದಲಾಯಿಸಿ "ಜಿ ರಾಮ್ ಜಿ" ಎನ್ನುವ ಹೆಸರಿನ ಯೋಜನೆ ಜಾರಿಗೊಳಿಸಿ, ಬಡವ, ಕೂಲಿ ಕಾರ್ಮಿಕರಿಗೆ ಕೊಡಲಿ ಪೆಟ್ಟು ಕೊಟ್ಟಿದೆ ಎಂದು ಹೇಳಿದರು.
ಮನರೇಗಾ ಮಸೂದೆ ಕುರಿತಾಗಿ ಸದನದಲ್ಲಿ ಇನ್ನೂ ಚರ್ಚೆ ನಡೆಯಬೇಕಿತ್ತು. ಆದರೆ, ತರಾತುರಿಯಲ್ಲಿ ಕಾಯ್ದೆ ತಂದು ದೇಶದ ಬಡ ಜನರಿಗೆ ತೊಂದರೆಗೀಡು ಮಾಡಿದೆ. ಮೊದಲೆಲ್ಲ ಬೇಗನೆ ಕೂಲಿ ಕೆಲಸ ಸಿಗುತ್ತಿತ್ತು. ಆದರೆ ಈ ಕಾಯ್ದೆಯಿಂದಾಗಿ ಅಂತಹ ಅವಕಾಶವನ್ನು ನರೇಂದ್ರ ಮೋದಿ ಸರ್ಕಾರ ಕಿತ್ತುಕೊಂಡಿದೆ ಎಂದ ಅವರು, "ರೈಟ್ ಟೂ ವರ್ಕ್" ಕೂಡ ತೆಗೆದು ಹಾಕಿದ್ದಾರೆ, ಇದರ ವಿರುದ್ಧ ದೇಶದೆಲ್ಲೆಡೆ ಹೋರಾಟ ಕೈಗೊಳ್ಳುವುದಾಗಿ ತಿಳಿಸಿದರು.
ನರೇಗಾ ಇರುವುದರಿಂದ ಕೋವಿಡ್ ವೇಳೆಯಲ್ಲಿ ಬಡ ಜನರಿಗೆ ಬದುಕು ಸಿಕ್ಕಿದೆ. ಹಿಂದೆ ನಾವು ನೀಡಿದ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಮೋದಿ ಸರ್ಕಾರ ತೆಗೆಯುವ ಕೆಲಸ ಮಾಡುತ್ತಿದೆ ಎಂದು ಆರೋಪ ಮಾಡಿದರು.
ಮಹಾತ್ಮಾ ಗಾಂಧೀಜಿ ಅವರನ್ನು ಹೊಗಳುವ ಬಿಜೆಪಿಗರು, ಮನರೇಗಾಗೆ ಮಹಾತ್ಮ ಗಾಂಧಿ ಹೆಸರಿದ್ರೆ ಏನು ಕಷ್ಟ ಆಗುತ್ತಿತ್ತು ಎಂದು ಪ್ರಶ್ನಿಸಿದ ಅವರು, "ಜಿ ರಾಮ್ ಜಿ" ಹೆಸರಿಟ್ಟು ಈಗೇನು ಸಾಧನೆ ಮಾಡಿದ್ದೀರಿ? ಎಂದು ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.
ದೂರದೃಷ್ಟಿ ಇಲ್ಲದ ಸರ್ಕಾರ :
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಯಾವುದೇ ದೂರದೃಷ್ಟಿಯ ಆಲೋಚನೆಗಳೇ ಇಲ್ಲ. ವರ್ಷಪೂರ್ತಿ ಸಂವಿಧಾನ ವಿರೋಧಿ ಕೆಲಸಗಳನ್ನೇ ಮಾಡಿಕೊಂಡು ಕಾಲ ಕಳೆಯುತ್ತಿದೆ. ಡೋನಾಲ್ಡ್ ಟ್ರಂಪ್ ಗೆ ಹೆದರಿ ಅಟಾಮಿಕ್ ಎನರ್ಜಿ ಬಿಲ್ ತಂದಿದ್ದು, ಎಲ್ಲವನ್ನೂ ಖಾಸಗೀಕರಣ ಮಾಡಲು ಪ್ರಧಾನಿ ಮೋದಿ ಹೊರಟಿದ್ದಾರೆ ಎಂದು ಹೇಳಿದರು .
ಕಾರ್ಯಕರ್ತರಿಂದ ಕಾಂಗ್ರೆಸ್ ಬೆಳೆದಿದೆ :
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಲ್ಲಿಕಾರ್ಜುನ್ ಖರ್ಗೆ ಅವರು, ಕಾಂಗ್ರೆಸ್ ಪಕ್ಷ ಯಾರೋ ಒಬ್ಬರಿಂದ ಬೆಳೆದಿರುವುದು ಇಲ್ಲ, ಯಾರೂ ಸಹ ನನ್ನಿಂದ ಅಧಿಕಾರಕ್ಕೆ ಬಂತು. ನಾನೇ ಪಕ್ಷ ಕಟ್ಟಿದ್ದೇನೆ ಎಂದು ಹೇಳಬಾರದು. ಪಕ್ಷ ಎಂದ ಮೇಲೆ ಎಲ್ಲರ ಪಾತ್ರವೂ ಪ್ರಮುಖವಾಗಿದೆ. ಒಬ್ಬರಿಂದಲೇ ಪಕ್ಷ ಇದೆ ಎಂದು ಕಾರ್ಯಕರ್ತರೂ ಹೇಳಬಾರದು.







