ಕಲಬುರಗಿ| ಈದ್ ಮಿಲಾದ್ ಪ್ರಯುಕ್ತ ರಕ್ತದಾನ, ವಿಧವೆಯರಿಗೆ ಹೊಲಿಗೆ ಯಂತ್ರ ವಿತರಣೆ

ಕಲಬುರಗಿ: ಪ್ರತಿಫಲಾಪೇಕ್ಷೆ ಇಲ್ಲದೆ ಸಮಾಜ ಅಥವಾ ದೇಶದ ಸೇವೆ ಮಾಡುವುದು, ದೀನ ದುರ್ಬಲರಿಗೆ ಅಗತ್ಯ ಕೆಲಸ ಮಾಡುವುದು, ಹಸಿದವರಿಗೆ ತುತ್ತು ಅನ್ನ ನೀಡಿದರೆ ಅದು ನಿಜವಾದ ಸೇವೆ, ಸೇವೆಯು ಪರಮ ಪವಿತ್ರ, ಜನರಲ್ಲಿ ಸ್ವಚ್ಛ-ಪ್ರಾಮಾಣಿಕ ಮನಸ್ಸಿನ ಸೇವೆಯನ್ನು ಮಾಡಬೇಕು ಅದೇ ಧರ್ಮ, ಎಲ್ಲರ ಜೊತೆ ಸಹೋದರ ಭಾವದಿಂದ ಹಬ್ಬ ಆಚರಣೆ ಮಾಡುವುದು ಪರಮ ಮಂತ್ರವಾಗಿದೆ ಎಂದು ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ.ಫಾರುಕ್ ಅಹ್ಮದ ಮನ್ನೂರ ಹೇಳಿದರು.
ಶಹಾಬಾದ ಪಟ್ಟಣದ ಸಹಾರಾ ಸಭಾಗೃದಲ್ಲಿ ಈದ್ ಮಿಲಾದ್ ಪ್ರಯುಕ್ತ ಕಲಬುರಗಿಯ ಮಣ್ಣೂರ ಆಸ್ಪತ್ರೆ, ತಾಲೂಕು ಮುಸ್ಲಿಂ ಫೋರಂ ವತಿಯಿಂದ ಉಚಿತ ರಕ್ತದಾನ ಶಿಬಿರ ಹಾಗೂ ಬಡ ವಿಧವೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಡಾ.ಫಾರುಕ್ ಅಹ್ಮದ ಮನ್ನೂರ, ಪ್ರತಿಯೊಂದು ಬಡವನಿಗೆ ಅನ್ನ, ವಸ್ತ್ರ ಇಲ್ಲದವನಿಗೆ ವಸ್ತ್ರ ರೋಗಿಗೆ ಚಿಕಿತ್ಸೆ, ಅನಾಥರಿಗೆ ಆಶ್ರಯ ನೀಡುವುದು ಧರ್ಮದ ಕಾರ್ಯವಾಗಿದೆ. ಈ ಸೇವೆ ಜಾತಿ ಆಧಾರದ ಮೇಲೆ ಮಾಡದೆ, ಮಾನವೀಯತೆ ಆಧಾರ ಮೇಲೆ ಮಾಡಬೇಕು. ಸಂವಿಧಾನ ನಮಗೆ ಶಿಕ್ಷಣದ ಹಕ್ಕು ಕೊಟ್ಟಿದ್ದು, ಪ್ರತಿಯೊಬ್ಬರು, ವಿಶೇಷವಾಗಿ ಮಹಿಳೆಯರು ಶಿಕ್ಷಣ ಪಡೆಯಬೇಕು ಎಂದು ಹೇಳಿದರು.
ವಯಕ್ತಿವಾಗಿ ಸುಕನ್ಯಾ ಸಮೃದ್ದಿ ಯೋಜನೆ ಅಡಿಯಲ್ಲಿ 650 ಜನ ಬಡ ಹೆಣ್ಣುಮಕ್ಕಳಿಗೆ ನೊಂದಣಿ ಮಾಡಿಸಿದ್ದು, 700 ಬಡ ರೋಗಿಗಳಿಗೆ ಅಸ್ಪತ್ರೆಯಿಂದ ದತ್ತು ಪಡೆದಿದ್ದೇನೆ, ಆಸ್ಪತ್ರೆಯಲ್ಲಿ ಮಧುಮೇಹ, ಬಿಪಿ, ಎಚ್‌ಐವಿಯನ್ನು ಉಚಿತವಾಗಿ ತಪಾಸಣೆ ನಡೆಸಲಾಗುತ್ತಿದೆ ಎಂದು ಹೇಳಿದರು.
ದಸಂಸ ರಾಜ್ಯ ಸಂಘಟನಾ ಸಂಚಾಲಕರಾದ ಮರಿಯಪ್ಪ ಹಳ್ಳಿ ಮಾತನಾಡಿ, ಪ್ರತಿಯೊಂದು ಧರ್ಮದ ಸಾರ ಒಂದೇಯಾಗಿದೆ. ಮಹಮ್ಮದ್ ಪೈಂಗಬರರು ಒಳ್ಳೆಯ ವಿಚಾರದಿಂದಾಗಿ ಮುಸ್ಲಿಂ ಧರ್ಮ ಜಗತ್ತಿನಲ್ಲಿ ಹೆಚ್ಚಾಗಿ ವ್ಯಾಪಿಸಿದೆ. ದೇಶದ ಶ್ರೇಷ್ಠ ಧರ್ಮವೇ ಸಂವಿಧಾನ ಅದರ ಅಡಿಯಲ್ಲಿ ಎಲ್ಲರೂ ಸಹೋದರತೆಯಿಂದ ಪ್ರೀತಿ, ವಿಶ್ವಾಸದಿಂದ ಶಾಂತಿ, ನೆಮ್ಮದಿಯಿಂದ ಬಾಳಬೇಕು ಎಂದು ಹೇಳಿದರು.
ಈ ವೇಳೆ ಸೆಂಟ್ ತೋಮಾಸ್ ಚರ್ಚನ ಫಾದರ ಜಿರಾಲ್ಡ್ ಸಾಗರ, ಜಾಮಿಯಾ ಮಸ್ಜಿದ ಇಮಾಮ್ ಅಬ್ದುಲ್ ಖದೀರ್ ಸಾಬ್ ರಶೀದಿ, ಡಿವೈಎಸ್‌ಪಿ ಶಂಕರಗೌಡ ಪಾಟೀಲ ಮಾತನಾಡಿದರು.
ಜೈ ಭಾರತ ಮಾತಾ ಸೇವಾ ಸಮಿತಿ ಅಧ್ಯಕ್ಷ ಡಾ.ಹವಾ ಮಲ್ಲಿನಾಥ ಮಹಾರಾಜ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಪೌರಾಯುಕ್ತ ಡಾ.ಕೆ.ಗುರುಲಿಂಗಪ್ಪ, ಪಿಐ ನಟರಾಜ ಲಾಡೆ, ವೈದ್ಯಾಧಿಕಾರಿ ಡಾ.ವೀರನಾಥ ಕನಕ, ವೈಜನಾಥ ಝಲಕಿ, ಜಾಮೀಯಾ ಮಸೀದಿ ಅಧ್ಯಕ್ಷ ಮತೀನ್ ಪಟೇಲ, ಅನ್ವರ ಚಪಾಟ್ಲೆ, ರಾಜು ಮೇಸ್ತಿ, ಶರಣು ಪಗಲಾಪುರ, ಮೃತ್ಯುಂಜಯ ಸ್ವಾಮಿ ಹಿರೇಮಠ, ಡಾ.ಅಶೋಕ ಜಿಂಗಾಡೆ , ಮಸ್ತಾನ, ಮಹ್ಮದ ಸಾಬೀರ ಬಾರಿ, ಸೈಯದ್ ಅರ್ಷದ, ಅಮ್ಜದ ಜಮಾದಾರ, ಜಹೀರ ಅಹ್ಮದ ಪಟ್ವೆಘರ, ನೀರಜ್ ಶರ್ಮಾ, ಮ.ಜಾವೀದ, ಮಹಿಬೂಬ ಪಟೇಲ, ಶಕೀಲ ಸೌದಾಗರ, ಖಾಜಾ ಖುತಬೋದ್ದಿನ್, ಹರೀಶ ಕರಣಿ, ವೆಂಕಟೇಶ ಚವ್ಹಾಣ್, ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.







