ಕಲಬುರಗಿ: ಭೀಮಾ ನದಿಯಲ್ಲಿ ಕೊಚ್ಚಿ ಹೋಗಿದ್ದ ಬಾಲಕನ ಮೃತದೇಹ ಪತ್ತೆ

ಕಲಬುರಗಿ: ಭೀಮಾ ನದಿಯಲ್ಲಿ ಸ್ನಾನ ಮಾಡುವಾಗ ಕೊಚ್ಚಿ ಹೋಗಿದ್ದ ಬಾಲಕನ ಮೃತದೇಹ ಪತ್ತೆಯಾಗಿದೆ.
ಆಳಂದ ತಾಲೂಕಿನ ಖಜೂರಿ ಗ್ರಾಮದ ಲಕ್ಷ್ಮಿಕಾಂತ ರಾಜು ಹತ್ತಿಗಳೆ(17) ಮೃತ ಬಾಲಕ.
ಮೃತ ಲಕ್ಷ್ಮೀಕಾಂತ್, ಸೋಮವಾರ ತನ್ನ ಕುಟುಂಬದೊಂದಿಗೆ ಗಾಣಗಾಪುರದ ದತ್ತಾತ್ರೇಯ ಸ್ವಾಮಿಯ ದರ್ಶನಕ್ಕೆ ಬಂದಿದ್ದ. ಈ ವೇಳೆಯಲ್ಲಿ ಭೀಮಾ ನದಿಯಲ್ಲಿ ಪುಣ್ಯ ಸ್ನಾನ ಮಾಡಲು ಕುಟುಂಬದ ನಾಲ್ವರು ಸದಸ್ಯರು ಇಳಿದಿದ್ದಾರೆ ಎನ್ನಲಾಗಿದೆ. ಈ ವೇಳೆಯಲ್ಲಿ ಸ್ನಾನ ಮಾಡಲು ನದಿಗೆ ಇಳಿದಿದ್ದ ಲಕ್ಷ್ಮೀಕಾಂತ್ ನೀರಿನ ರಭಸಕ್ಕೆ ಸುಳಿಯಲ್ಲಿ ಸಿಲುಕಿ ಕೊಚ್ಚಿ ಹೋಗಿದ್ದಾನೆ. ಸ್ನಾನಕ್ಕೆ ಇಳಿದಿದ್ದ ನಾಲ್ವರ ಪೈಕಿ ಮೂವರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಆದರೆ ಲಕ್ಷ್ಮೀಕಾಂತ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಇಂದು ಲಕ್ಷ್ಮೀಕಾಂತ ಮೃತದೇಹ ಪತ್ತೆಯಾಗಿದೆ.
ದೇವಲ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣ ಕುರಿತು ಹೆಚ್ಚಿನ ಮಾಹಿತಿಗಾಗಿ ವಾರ್ತಾಭಾರತಿಯು ಸ್ಥಳೀಯ ಪೊಲೀಸ್(ಠಾಣೆಯ ಪಿಎಸ್ಐ) ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಸಂಪರ್ಕಿಸಿದಾಗ ಅವರು ಕರೆಗೆ ಸ್ಪಂದಿಸಿಲ್ಲ.





