ವಧು-ವರರ ಸಮಾವೇಶಗಳು ಸೂಕ್ತ ಜೀವನ ಸಂಗಾತಿ ಆಯ್ಕೆಗೆ ಉತ್ತಮ ವೇದಿಕೆ: ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಬದಲಾಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಸೂಕ್ತ ಮದುವೆ ಸಂಬಂಧಗಳನ್ನು ನಿಶ್ಚಯಿಸುವುದು ಸವಾಲಿನ ಸಂಗತಿಯಾಗಿದೆ. ಹೀಗಾಗಿ ಯುವಕ-ಯುವತಿಯರು ವಧು-ವರರ ಸಮಾವೇಶಗಳ ಸದುಪಯೋಗ ಪಡೆದುಕೊಂಡು ತಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.
ನಗರದ ಜಗತ್ ಬಡಾವಣೆಯ ಶರಣ ಡೋಹರ ಕಕ್ಕಯ್ಯ ದೇವಸ್ಥಾನದ ಆವರಣದಲ್ಲಿ ದೇವಸ್ಥಾನ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವಧು-ವರರ ಸಮಾವೇಶ-2026 ಉದ್ಘಾಟಿಸಿ ಅವರು ಮಾತನಾಡಿದರು.
ಸಮುದಾಯದ ಯುವಕ-ಯುವತಿಯರಿಗೆ ಸೂಕ್ತ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಇಂತಹ ಸಮಾವೇಶಗಳು ಉತ್ತಮ ವೇದಿಕೆಯಾಗಿವೆ. ಪರಸ್ಪರ ಪರಿಚಯ, ಕುಟುಂಬಗಳ ನಡುವೆ ವಿಚಾರ ವಿನಿಮಯ ಹಾಗೂ ಸೂಕ್ತ ಸಂಬಂಧ ಬೆಳೆಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಕಲಘಟಗಿಯ ಪೂಜ್ಯ ಗುರುಮಾತಾ ನಂದಾತಾಯಿ ಹಾಗೂ ಕಲಬುರಗಿಯ ಮಾತಾ ಅಕ್ಕಮಹಾದೇವಿ ಆಶ್ರಮದ ಪೂಜ್ಯ ಮಾತೋಶ್ರೀ ಪ್ರಭುಶ್ರೀ ಅವರ ದಿವ್ಯ ಸಾನ್ನಿಧ್ಯವಿತ್ತು. ಟ್ರಸ್ಟ್ ಅಧ್ಯಕ್ಷ ಸಾಯಿಬಣ್ಣ ಮಸಾಜಿ ಹೋಳಕರ್ ಅಧ್ಯಕ್ಷತೆ ವಹಿಸಿದ್ದರು.
ಸಮಾವೇಶದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ ಜತೆಗೆ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಿಂದಲೂ ನೂರಾರು ವಧು-ವರರು ಭಾಗವಹಿಸಿದ್ದರು. ಯುವಕ-ಯುವತಿಯರು ಪರಸ್ಪರ ಪರಿಚಯ ಮಾಡಿಕೊಂಡು ತಮ್ಮ ವಿದ್ಯಾಭ್ಯಾಸ, ಉದ್ಯೋಗ, ಕುಟುಂಬ ಹಾಗೂ ವೈಯಕ್ತಿಕ ವಿವರಗಳನ್ನು ಹಂಚಿಕೊಂಡರು. ವಿವಿಧ ಭಾಗಗಳಿಂದ ಆಗಮಿಸಿದ್ದ ಕುಟುಂಬಗಳಿಗೆ ತಮ್ಮ ಮಕ್ಕಳಿಗೆ ಸೂಕ್ತ ಜೀವನ ಸಂಗಾತಿಯನ್ನು ಹುಡುಕಿಕೊಳ್ಳಲು ಸಮಾವೇಶ ಸಹಕಾರಿಯಾಯಿತು.
ಕಾರ್ಯಕ್ರಮದಲ್ಲಿ ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ, ಉಮರ್ಗಾ ಮಾಜಿ ಶಾಸಕ ಜ್ಞಾನದೆವ್ ಚೌಗಲೇ, ಲಾತೂರ ಮಾಜಿ ಶಾಸಕ ಧರ್ಮಾಜಿ ಗಿರಿಜಪ್ಪ ಸೋನಕವಡೆ, ಸೋಲಾಪುರ ಕಾಂಗ್ರೆಸ್ ಸಮಿತಿ ಮಾಜಿ ಕಾರ್ಯದರ್ಶಿ ಸುಧೀರ್ ಖರಟಮಲ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ಇದಲ್ಲದೆ ಭೀಮಣ್ಣ ಬೋನಾಳ, ಮೋತಿಲಾಲ ಎಂ. ಕಟಕೆ, ಲಿಂಗೋಜಿ ಪಿ. ಗಾಜರೆ, ಅನೀಲಕುಮಾರ ಎ. ಸಾವಳಕರ್, ಡಾ. ಸಂತೋಷ ಎಂ. ಕಟಕೆ, ಚಿದಾನಂದ ಬಿ. ಪೋಲ್, ನಾಗರಾಜ ಶೇರಖಾನೆ, ವಿನಾಯಕ ಗಡ್ಡಿ, ಅಮೃತ ಮಹಾವರ್ಕರ್, ತ್ಯಾಗರಾಜ ಕದಮ್, ಸದಾಶಿವ ಹೋಟಕರ್ ಸೇರಿದಂತೆ ಸಮುದಾಯದ ಹಲವು ಮುಖಂಡರು, ಯುವಕರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.






