ನ್ಯಾಯಾಂಗ ಸೇವೆ ಜನರ ಮನೆಬಾಗಿಲಿಗೆ ತಲುಪಿಸುವುದು ಪ್ರಜಾಪ್ರಭುತ್ವ ಬಲಪಡಿಸುವ ಕಾರ್ಯ: ಸಚಿವ ಅಜಯ್ ಸಿಂಗ್

ಯಡ್ರಾಮಿ: ನ್ಯಾಯ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದ್ದು, ನ್ಯಾಯಾಂಗ ಸೇವೆಗಳನ್ನು ಜನಸಾಮಾನ್ಯರ ಮನೆಬಾಗಿಲಿಗೆ ತಲುಪಿಸುವುದು ಪ್ರಜಾಪ್ರಭುತ್ವವನ್ನು ಬಲಪಡಿಸುವ ಮಹತ್ವದ ಕಾರ್ಯವಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಜಯ್ ಧರ್ಮಸಿಂಗ್ ಹೇಳಿದರು.
ಯಡ್ರಾಮಿಯಲ್ಲಿ ನೂತನವಾಗಿ ಸ್ಥಾಪಿಸಲಾದ ದಿವಾಣಿ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ನ್ಯಾಯಕ್ಕಾಗಿ ಜನರು ದೂರದ ಊರುಗಳಿಗೆ ಪ್ರಯಾಣಿಸಬೇಕಾದ ಅನಿವಾರ್ಯತೆ ತಪ್ಪಬೇಕು. ಸ್ಥಳೀಯ ಮಟ್ಟದಲ್ಲಿಯೇ ನ್ಯಾಯಾಂಗ ಸೇವೆಗಳು ಲಭ್ಯವಾಗಬೇಕು. ಯಡ್ರಾಮಿಯಲ್ಲಿ ನೂತನ ನ್ಯಾಯಾಲಯ ಆರಂಭವಾಗಿರುವುದರಿಂದ ಈ ಭಾಗದ ಜನರಿಗೆ ನ್ಯಾಯ ಪಡೆಯುವುದು ಮತ್ತಷ್ಟು ಸುಲಭವಾಗಲಿದೆ ಎಂದರು.
ನ್ಯಾಯದಾನ ವ್ಯವಸ್ಥೆಯ ವಿಕೇಂದ್ರೀಕರಣದಿಂದ ಸಾರ್ವಜನಿಕರ ಸಮಯ, ಶ್ರಮ ಹಾಗೂ ಪ್ರಯಾಣದ ವೆಚ್ಚ ಕಡಿಮೆಯಾಗಲಿದೆ. ಪ್ರಕರಣಗಳ ವಿಚಾರಣೆ ಮತ್ತು ನ್ಯಾಯಾಂಗ ಸೇವೆಗಳ ಲಭ್ಯತೆಯಲ್ಲಿಯೂ ಅನುಕೂಲವಾಗಲಿದೆ ಎಂದು ತಿಳಿಸಿದರು.
ನೂತನ ನ್ಯಾಯಾಲಯದ ಸುಗಮ ಕಾರ್ಯನಿರ್ವಹಣೆಗೆ ಅಗತ್ಯವಿರುವ ಪೀಠೋಪಕರಣಗಳನ್ನು ಒದಗಿಸಲು ಲೋಕೋಪಯೋಗಿ ಇಲಾಖೆ ವತಿಯಿಂದ 25 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ಸಚಿವರು ಘೋಷಿಸಿದರು.
ತ್ವರಿತ, ಸುಲಭ ಹಾಗೂ ಸಮಾನ ನ್ಯಾಯದಾನವು ಬಲಿಷ್ಠ ಪ್ರಜಾಪ್ರಭುತ್ವದ ಆಧಾರವಾಗಿದೆ. ಪ್ರತಿಯೊಬ್ಬರಿಗೂ ನ್ಯಾಯ ಸುಲಭವಾಗಿ ದೊರೆಯುವಂತಾಗಬೇಕು. ನ್ಯಾಯಪೂರ್ಣ ಸಮಾಜ ನಿರ್ಮಾಣ ನಮ್ಮ ಆಶಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜಸ್ಟಿಸ್ ಶಿವಶಂಕರ್ ಅಮರಣ್ಣನವರ್ ಸೇರಿದಂತೆ ನ್ಯಾಯಾಂಗ ಮತ್ತು ಆಡಳಿತ ಇಲಾಖೆಯ ಗಣ್ಯರು ಉಪಸ್ಥಿತರಿದ್ದರು.






