ನನ್ನ ಕ್ಷೇತ್ರದಲ್ಲೇ ನನಗೆ ಗೊತ್ತಿಲ್ಲದೆ ಕಾಮಗಾರಿಗಳು ನಡೆಯುತ್ತಿವೆ : ಬಿ.ಆರ್.ಪಾಟೀಲ್ ಅಸಮಾಧಾನ
"ಅಲ್ಪಸಂಖ್ಯಾತ ಇಲಾಖೆಯಿಂದ 17 ಕೋಟಿ ರೂ. ಬಂದಿದೆ, ಆದರೆ ಆ ಬಗ್ಗೆ ನನಗೆ ಮಾಹಿತಿಯೇ ಇಲ್ಲ"

ಬಿ.ಆರ್.ಪಾಟೀಲ್
ಕಲಬುರಗಿ : ನನ್ನ ಕ್ಷೇತ್ರದಲ್ಲಿ ನನಗೆ ಗೊತ್ತಿಲ್ಲದೇ ಕೆಲವು ಸರಕಾರಿ ಕಾಮಗಾರಿ ನಡೆಯುತ್ತಿವೆ, ಇದು ನನ್ನ ಕ್ಷೇತ್ರದಲ್ಲಿ ಶಿಷ್ಠಾಚಾರದ ಉಲ್ಲಂಘಟನೆ ಆಗುತ್ತಿದೆ ಎಂದು ಆಳಂದ ಶಾಸಕ ಬಿ.ಆರ್.ಪಾಟೀಲ್ ಆರೋಪಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಕ್ಷೇತ್ರಕ್ಕೆ ಅಲ್ಪಸಂಖ್ಯಾತರ ನಿಧಿಗೆ 17 ಕೋಟಿ ರೂ. ಹಣ ಬಂದಿದೆ. ಕಾಮಗಾರಿಯೂ ಸಹ ಶುರುವಾಗಿದೆ. ಆದರೆ ಗುದ್ದಲಿ ಪೂಜೆಗೂ ನನ್ನನ್ನು ಕರೆದಿಲ್ಲ, ಇದನ್ನು ನೋಡಿದರೆ ಇಲ್ಲಿ ಸ್ಪಷ್ಟವಾಗಿ ಶಿಷ್ಟಾಚಾರದ ಉಲ್ಲಂಘನೆಯಾಗಿದೆ. ಒಬ್ಬ ಶಾಸಕನಾಗಿ ಹಣ ಬಂದಿರುವುದು, ಕೆಲಸ ಶುರುವಾಗಿರುವುದು ನನಗೆ ಗೊತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಕೆಆರ್ಡಿಬಿಯಿಂದ ಮೌಲಾನಾ ಅಬ್ದುಲ್ ಕಲಾಂ ಆಝಾದ್ ವಸತಿ ಶಾಲೆ ಕಟ್ಟುತ್ತಿದ್ದೇವೆ, ಈಗ ಅಲ್ಪಸಂಖ್ಯಾತರ ಇಲಾಖೆಯಿಂದ ಮತ್ತೆ 17 ಕೋಟಿ ರೂ. ಬಂದಿದೆ, ಇಲಾಖೆಯಿಂದ ಈ ರೀತಿ ಹಣ ಕೊಡುವುದಾದರೆ ನಾನು ಏಕೆ ಕೆಕೆಆರ್ಡಿಬಿಯಿಂದ ತೆಗೆದುಕೊಳ್ಳುತ್ತಿದ್ದೆ. ಇದೇ ಮಂಡಳಿಯ ಹಣ ನಾನು ಬೇರೆ ಕೆಲಸಕ್ಕಾದರೂ ಬಳಸಿಕೊಳ್ಳುತ್ತಿದ್ದೆ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.





