ಪ್ರತಿಯೊಂದರಲ್ಲೂ ಪರ್ಸೆಂಟೇಜ್ ಪಡೆಯುವ ಬಿ.ಆರ್.ಪಾಟೀಲ್ ಅವರು ಅತೀ ದೊಡ್ಡ ಭ್ರಷ್ಟ ಶಾಸಕ: ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಆರೋಪ

ಕಲಬುರಗಿ: ಪ್ರತಿಯೊಂದು ಕಾಮಗಾರಿ, ಜನರು ಪಡೆದುಕೊಳ್ಳುವ ಸರಕಾರಿ ಯೋಜನೆಗಳಲ್ಲಿಯೂ ಆಳಂದ ಶಾಸಕ ಬಿ.ಆರ್.ಪಾಟೀಲ್ ಅವರು ಪರ್ಸೆಂಟೇಜ್ ಪಡೆದುಕೊಳ್ಳುತ್ತಾರೆ. ಅವರು ರಾಜ್ಯದ 224 ಶಾಸಕರಲ್ಲೇ ಅತೀ ದೊಡ್ಡ ಭ್ರಷ್ಟಾಚಾರದ ಶಾಸಕರಾಗಿದ್ದಾರೆ ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ್ ಆರೋಪಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜೀವ್ ಗಾಂಧಿ ಯೋಜನೆಯಲ್ಲಿ ತಮ್ಮದೇ ಪಕ್ಷದ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರುಗಳು ಶಾಸಕರ ಲೆಟರ್ ಹೆಡ್ ಹಚ್ಚಿಕೊಂಡೆ ದುಡ್ಡು ಕೊಟ್ಟು 950 ಮನೆಗಳನ್ನು ಮಂಜೂರು ಮಾಡಿಸಿಕೊಂಡಿದ್ದಾರೆ. ಒಂದೊಂದು ಮನೆಗಳಿಗೆ 15 ರಿಂದ 25 ಸಾವಿರ ತನಕ ಹಣ ನೀಡಿ ಮನೆಮಾಡಿಕೊಂಡಿದ್ದಾರೆ. ಇಂತಹ ವೇಳೆ ನಾನು ಕೊಟ್ಟ ಲೆಟರ್ ಗಳಿಗೆ ಮನೆಗಳು ಮಂಜೂರು ಮಾಡಿಲ್ಲ ಎಂದು ಹೇಳಿಕೆ ನೀಡಿ ಆಡಿಯೋ ವೈರಲ್ ಮಾಡಿದ್ದಾರೆ. ಇದರ ಅರ್ಥ ಏನೆಂದರೆ, ನಾನು ಭ್ರಷ್ಟ ಅಲ್ಲ ಎಂದು ಹೇಳಿಕೊಳ್ಳಲು ಇದನ್ನು ಮಾಡಿದ್ದಾರೆ ಎಂದು ಆರೋಪಿಸಿದರು.
ಉದ್ಯೋಗ ಖಾತ್ರಿಯಲ್ಲಿ 465 ಅಕ್ರಮ ತೆರೆದ ಬಾವಿಗಳ ಹಣ ಲೂಟಿ ಮಾಡಿದ್ದಾರೆ. ಇದರ ಬಗ್ಗೆ ಜಿಲ್ಲಾ ಕಾರ್ಯ ನಿರ್ವಹಣಾ ಅಧಿಕಾರಿ ಅವರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಬೆಂಗಳೂರಿನ ನರೇಗಾ ಆಯುಕ್ತರಿಗೆ ದೂರು ಕೊಟ್ಟಿದ್ದರಿಂದ ಒಬ್ಬ ಭ್ರಷ್ಟ ಪಿಡಿಓರನ್ನು ಅಮಾನತ್ತು ಮಾಡಿದ್ದಾರೆ. ಬಳಿಕ ಅದೇ ಪಿಡಿಓ ರನ್ನೇ ಆಳಂದ ತಾಲ್ಲೂಕಿನ ಅವರ ಗ್ರಾಮದಲ್ಲೇ ನಿಯೋಜನೆ ಮಾಡಿದ್ದಾರೆ ಎಂದರು.
ರಾಜೀವ ಗಾಂಧಿ ವಸತಿ ನಿಗಮದಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನಲಾದ ಹಗರಣದ ತನಿಖೆಯನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂತೋಷ್ ಹಾದಿಮನಿ, ಶಿವಪುತ್ರ ನಡಗೇರಿ, ಬಾಬುರಾವ್ ಹಾಗರಗುಂಡಗಿ, ಹಣಮಂತ ಶೇರಿ ಇದ್ದರು.
ಸಚಿವ ಸ್ಥಾನಕ್ಕಾಗಿ ಶಾಸಕ ಬಿ.ಆರ್.ಪಾಟೀಲ್ ಬ್ಲ್ಯಾಕ್ ಮೇಲ್:
ತನಗೆ ಸಚಿವ ಸ್ಥಾನ ಕೊಡಬೇಕು ಎಂಬ ಕಾರಣಕ್ಕಾಗಿ ಆಳಂದ ಶಾಸಕ ಬಿ.ಆರ್.ಪಾಟೀಲ್ ಅವರು ಆಡಿಯೋವನ್ನು ವೈರಲ್ ಮಾಡುವ ಮೂಲಕ ರಾಜ್ಯ ಸರಕಾರಕ್ಕೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಈ ಹಿಂದೆಯೂ ಸರಕಾರ ವಿರುದ್ಧವೇ ಆರೋಪ ಮಾಡುವ ಮೂಲಕ ಎರಡು ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಈಗ ಸಚಿವಗಿರಿಗಾಗಿ ತಮ್ಮ ಆಪ್ತರಾಗಿರುವ ಸಿಎಂ ಮತ್ತು ಸರಕಾರವನ್ನೇ ಅಲ್ಲಾಡಿಸುವುದಕ್ಕೆ ತಂತ್ರ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ್ ಹೇಳಿದ್ದಾರೆ.







