ಬುದ್ಧ, ಬಸವ, ಅಂಬೇಡ್ಕರ್ ದಮನಿತರ ಪರವಾಗಿ ಅಹರ್ನಿಷಿ ದುಡಿದವರು: ಡಾ. ಶಿವರಂಜನ ಸತ್ಯಂಪೇಟೆ
ಕಲಬುರಗಿಯಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಜಯಂತಿ ಕಾರ್ಯಕ್ರಮ

ಕಲಬುರಗಿ: ಬುದ್ಧ, ಬಸವ, ಅಂಬೇಡ್ಕರ್ ಈ ಮೂವರು ಭಿನ್ನ ಕಾಲಘಟ್ಟದಲ್ಲಿ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಪರಿಸರದಲ್ಲಿ ಬಂದವರಾದರೂ, ಈ ಮೂವರನ್ನು ಸಮಾನತೆಯ ಸೂತ್ರದಲ್ಲಿ ಹಿಡಿದಿರಿಸಬಹುದಾಗಿದೆ ಎಂದು ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿಜ್ಞಾನ ಕಟ್ಟಡ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬುದ್ಧ, ಬಸವ, ಅಂಬೇಡ್ಕರ್ ಮೂವರು ರಾಜಕುಮಾರ, ಮಂತ್ರಿಗಳೇ ಆಗಿದ್ದರು. ಆದರೂ ಈ ಮೂರು ಜನ ತಮ್ಮ ಪದವಿಗಳನ್ನು ತ್ಯಜಿಸಿ ದುಃಖಿತರ ಪರವಾಗಿ ನಿಂತು ಅಹರ್ನಿಷಿ ದುಡಿದರು. ಬುದ್ಧ, ಬಸವ, ಅಂಬೇಡ್ಕರ್ ಅವರ ಸಾಮಾಜಿಕ ಚಳವಳಿಗಳು ಮೂಲದಲ್ಲಿ ತುಳಿತಕ್ಕೆ ಒಳಗಾದ ಜನರಿಗಾಗಿ ಎಂಬುದನ್ನು ನಾವ್ಯಾರೂ ಮರೆಯಬಾರದು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಗತಿಪರ ಚಿಂತಕ ಸುರೇಶ ಬಡಿಗೇರ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಜಾತಿಯ ಕಾರಣದಿಂದ ಒಪ್ಪಿಕೊಳ್ಳದಿದ್ದರೆ ನಮ್ಮಷ್ಟು ಮೂರ್ಖರು ಯಾರೂ ಇಲ್ಲ. ಆರ್.ಬಿ.ಐ. ಸ್ಥಾಪನೆಗೆ ಸಲಹೆ ನೀಡಿದ್ದ ಅಂಬೇಡ್ಕರ್ ರು, ನಿಜವಾದ ಸ್ತ್ತೀ ವಿಮೋಚಕರಾಗಿದ್ದರು, ರಾಷ್ಟ್ರಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ಧ ಕಾಲೇಜಿನ ಪ್ರಾಚಾರ್ಯ ಪ್ರೊ. ಪ್ರಕಾಶ ಮೋರ್ಗೆ ಮಾತನಾಡಿ, ಮಹಾತ್ಮರ ಕೊಡುಗೆಗಳನ್ನು ಸ್ಮರಿಸುತ್ತಾ ಸಂವಿಧಾನ ಎಲ್ಲ ಜಾತಿ, ಧರ್ಮಕ್ಕೆ ಅನ್ವಯ ಎಂದು ಹೇಳಿದರು.
ಬುದ್ಧ, ಬಸವ, ಅಂಬೇಡ್ಕರ್ ವೇದಿಕೆ ಸಂಚಾಲಕಿ ಡಾ. ಪದ್ಮಾವತಿ ಧನ್ನಿ ವೇದಿಕೆಯಲ್ಲಿ ಇದ್ದರು. ಡಾ. ವಿಜಯಕುಮಾರ ಹೆಬ್ಬಾಳಕರ ನಿರೂಪಿಸಿದರು. ಪ್ರೊ. ಅರವಿಂದ ದ್ಯಾಮಾ ಸ್ವಾಗತಿಸಿದರು.
ಡಾ. ಪದ್ಮಣ್ಣ ರಾಸಣಗಿ, ಪ್ರೊ. ದಯಾಸಾಗರ, ಪ್ರೊ. ಸಂತೋಷ, ಡಾ. ರೂಪಾಲಿ ಮತ್ತಿತರರು ಇದ್ದರು.







