ಕಲಬುರಗಿಯಲ್ಲಿ ಬುದ್ಧ-ಬಸವ-ಅಂಬೇಡ್ಕರ್ ಸೌಹಾರ್ದ ಸಹಕಾರಿ ಸಂಘ ಉದ್ಘಾಟನೆ

ಕಲಬುರಗಿ: ಸಾಮಾಜಿಕ ಸೌಹಾರ್ದತೆ, ಆರ್ಥಿಕ ಸ್ವಾವಲಂಬನೆ ಹಾಗೂ ಸಹಕಾರಿ ಮನೋಭಾವದ ಆಶಯದೊಂದಿಗೆ “ಬುದ್ಧ ಬಸವ ಅಂಬೇಡ್ಕರ್ (ಬಿಬಿಎ) ಸೌಹಾರ್ದ ಸಹಕಾರಿ ಸಂಘ”ವನ್ನು ನಗರದ ಹಳೆ ಜೇವರ್ಗಿ ರಸ್ತೆಯ ಶ್ರೀರಾಮ ಆರ್ಕೆಡ್ ಕಟ್ಟಡದಲ್ಲಿ ರವಿವಾರ ಉದ್ಘಾಟಿಸಲಾಯಿತು.
ಕರ್ನಾಟಕ ರಾಜ್ಯದ ಸೌಹಾರ್ದ ಸಹಕಾರಿ ಸಂಘಗಳ ನಿರ್ದೇಶಕಿ ಶೈಲಜಾ ತಪಲಿ ಅವರು ರಿಬ್ಬನ್ ಕತ್ತರಿಸುವ ಮೂಲಕ ಸಂಘವನ್ನು ಉದ್ಘಾಟಿಸಿದರು. ಬಳಿಕ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವೇದಿಕೆಯಲ್ಲಿದ್ದ ಗಣ್ಯರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಿಬಿಎ ಸೌಹಾರ್ದ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಮಿಣಜಗಿ ಹಾಗೂ ಉಪಾಧ್ಯಕ್ಷರಾಗಿ ಭೀಮರಾಯ ತೆಗನೂರ ಅವರು ಪ್ರಮಾಣವಚನ ಸ್ವೀಕರಿಸಿದರು. ನೂತನ ಪದಾಧಿಕಾರಿಗಳಿಗೆ ಗಣ್ಯರು ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಶೈಲಜಾ ತಪಲಿ ಅವರು, “ಸೌಹಾರ್ದ ಸಹಕಾರಿ ಸಂಘಗಳು ರೈತರು ಹಾಗೂ ಸಾಮಾನ್ಯ ಜನರಿಗೆ ಆರ್ಥಿಕ ನೆರವಾಗುತ್ತಿವೆ. ಖಾಸಗಿ ಫೈನಾನ್ಸ್‌ಗಳ ಅವಲಂಬನೆ ಕಡಿಮೆಯಾಗಲು ಸಹಕಾರಿ ಕ್ಷೇತ್ರ ಪ್ರಮುಖ ಪಾತ್ರ ವಹಿಸಿದೆ. ಇದು ಕೇವಲ ವ್ಯವಹಾರವಲ್ಲ, ಸೇವಾ ಕ್ಷೇತ್ರವೂ ಹೌದು. ಮಹಿಳೆಯರ ಆರ್ಥಿಕ ಸ್ವಾವಲಂಬನೆಗೂ ಸಹಕಾರಿ ಸಂಘಗಳು ನೆರವಾಗುತ್ತಿವೆ” ಎಂದು ಹೇಳಿದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಸೂರ್ಯಕಾಂತ ಎಂ.ಕೆ. ಮಾತನಾಡಿ, “2000 ರಿಂದ 5000 ರೂ.ವರೆಗೆ ಸದಸ್ಯತ್ವ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಸದಸ್ಯರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ, ಆರೋಗ್ಯ ವಿಮೆ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತದೆ. ಸಾಲ ಪಡೆದ ಸದಸ್ಯರು ಅನಾರೋಗ್ಯ ಅಥವಾ ಆಕಸ್ಮಿಕ ಮರಣ ಹೊಂದಿದಲ್ಲಿ ಸಾಲ ಮನ್ನಾ ಮಾಡುವ ವಿಶೇಷ ಯೋಜನೆಯನ್ನೂ ಜಾರಿಗೆ ತರಲಾಗಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಜೀವ ಕುಮಾರ್ ಮಹಾಜನ, ಕಲಬುರಗಿ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷ ಎಸ್.ಎಸ್. ಪಾಟೀಲ್, ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಪತ್ತಿನ ಸಂಘದ ಪ್ರಾಂತೀಯ ವ್ಯವಸ್ಥಾಪಕ ಸಂಜಯ ಕೋಟಕರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಮಿಣಜಗಿ ವಹಿಸಿದ್ದರು. ಸೂರ್ಯಕಾಂತ್ ಎಂ.ಕೆ., ಶೋಭಾವತಿ, ಶ್ರೀಮಂತ ಜಮಾದಾರ್, ಶಿವಾನಂದ ಕಾಂಬಳೆ, ಸಾಯಿಬಣ್ಣ ಭಜಂತ್ರಿ, ಮಧುಮತಿ ನಾಯಕ್, ಸಚಿನ್ ಬಿ.ಎಂ., ಕೈಲಾಸ ಪಾಟೀಲ್, ಶಿವಶರಣಪ್ಪ ಸಿಂಗೆ, ರಾಕೇಶ್ ಚೆಂಗಟಿ, ಚಿಕ್ಕಯ್ಯ ಎಸ್.ಡಿ., ಚೇತನ್ ಕುಮಾರ್ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.






