ತೊಗರಿಗೆ ವಿಶೇಷ ಪ್ಯಾಕೇಜ್ ಘೋಷಣೆಗೆ ಆಗ್ರಹಿಸಿ ಜ.22ರಂದು ಕಲಬುರಗಿ ಬಂದ್‌ಗೆ ಕರೆ

ಕಲಬುರಗಿ : ತೊಗರಿಯ ನಾಡಾಗಿರುವ ಕಲಬುರಗಿ ಜಿಲ್ಲೆಯ ತೊಗರಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಈ ಭಾಗಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜ. 22ರಂದು ಕಲಬುರಗಿ ಬಂದ್ ಕರೆ ನೀಡಲು ಅಧ್ಯಕ್ಷೀಯ ಮಂಡಳಿಯು ಶುಕ್ರವಾರ ನಗರದ ಐವಾನ್ ಶಾಹಿ ಅತಿಥಿ ಗೃಹದಲ್ಲಿ ಜರುಗಿದ ದುಂಡು ಮೇಜಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರು ತಿಳಿಸಿದ್ದಾರೆ.
ತೇವಾಂಶ ಕೊರತೆಯಿಂದ ಒಣಗಿದ ತೊಗರಿಗೆ ಪರಿಹಾರ ನೀಡುವಂತೆ, ಬೆಳೆ ವಿಮೆ ಮಂಜೂರು ಮಾಡುವಂತೆ, ಬೆಂಬಲ ಬೆಲೆ ನಿಗದಿಪಡಿಸುವಂತೆ, ಎಂಎಸ್ಪಿ ಬೆಂಬಲ ಬೆಲೆ ನಿಗದಿಪಡಿಸುವಂತೆ, ರೈತರ ಸಾಲ ಮನ್ನಾ ಮಾಡುವಂತೆ, ಕ್ವಿಂಟಲ್ ತೊಗರಿಗೆ ಕೇಂದ್ರ ಸರಕಾರದ 1,000 ರೂ.ಗಳ ಪ್ರೋತ್ಸಾಹ ಧನ ಕೊಡುವಂತೆ, ರಾಜ್ಯ ಸರಕಾರ ಮುಖ್ಯಮಂತ್ರಿಗಳ ಆವರ್ತ ನಿಧಿ 500ರೂ.ಗಳನ್ನು ಕೊಡುವಂತೆ ಒತ್ತಾಯಿಸಿದ್ದಾರೆ.
ತೊಗರಿ ಕಣಜ ಎಂದು ಏಷ್ಯಾ ಖಂಡದಲ್ಲಿ ಪ್ರಸಿದ್ಧ ವಾಗಿದೆ, ಜಿಲ್ಲೆಯ ಆರ್ಥಿಕತೆ ನಿರ್ಧಾರವಾಗುವುದೇ ತೊಗರಿ ಮೇಲೆ. ಬಂಪರ್ ಬೆಳೆ ಬಂದರೆ ಮಾತ್ರ ಅನ್ನದಾತರ ಮೊಗದಲ್ಲಿ ಮಂದಹಾಸ ಕಾಣಲು ಸಾಧ್ಯ. ಒಂದೆಡೆ ಬರ, ಇನ್ನೊಂದೆಡೆ ನೆರೆ. ಎರಡೂ ಪಾರಾಗಿ ಬಂದರೂ ಸೂಕ್ತ ಬೆಲೆ ಸಿಗದೇ ರೈತ ಕಂಗಾಲಾಗುವಂತೆ ಮಾಡಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ದುಂಡು ಮೇಜಿನ ಸಭೆಯಲ್ಲಿ ಮುಖ್ಯಮಂತ್ರಿಗಳ ಸಲಹೆಗಾರರೂ ಆದ ಆಳಂದ್ ಶಾಸಕ ಬಿ.ಆರ್.ಪಾಟೀಲ್, ಭೀಮಾಶಂಕರ್ ಮಾಡಿಯಾಳ್, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಗುಪ್ತಲಿಂಗ್ ಪಾಟೀಲ್, ಉಮಾಪತಿ ಪಾಟೀಲ್, ನ್ಯಾಯವಾದಿ ಬಸಣ್ಣಾ ಸಿಂಗೆ, ಆಹಾರ ಧಾನ್ಯಗಳ ಬೀಜ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಂತೋಷ್ ಲಂಗರ್, ಮಹಾಂತೇಶ್ ಜಮಾದಾರ್, ಎಸ್.ಆರ್. ಕೊಲಲೂರ್, ಅರ್ಜುನ್ ಗೊಬ್ಬೂರ್, ಎಂ.ಬಿ. ಸಜ್ಜನ್, ನಾಗಯ್ಯಸ್ವಾಮಿ, ಮಹೇಶ್ ಎಸ್.ಬಿ., ಎ.ಬಿ. ಹೊಸಮನಿ, ಸಲೀಮ್ ಅಹ್ಮದ್ ಚಿತ್ತಾಪೂರಿ, ಬಸವರಾಜ್ ಇಂಗಿನ್, ಮೌಲಾ ಮುಲ್ಲಾ, ನಾಗೇಂದ್ರಪ್ಪ ಥಂಬೆ, ರಮೇಶ್ ರಾಗಿ, ದಿಲೀಪ್ ನಾಗೂರೆ, ಶರಣಬಸಪ್ಪ ಮಮಶೆಟ್ಟಿ ಮುಂತಾದವರು ಪಾಲ್ಗೊಂಡಿದ್ದರು.







