ಶಾಸಕ ಬಸವರಾಜ ಮತ್ತಿಮಡುಗೆ ಜಾತಿ ನಿಂದನೆ ಆರೋಪ ; ಸವಿತಾನಂದ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲು

ಸವಿತಾನಂದ ಸ್ವಾಮೀಜಿ, ಬಸವರಾಜ ಮತ್ತಿಮಡು
ಕಲಬುರಗಿ: ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಮತ್ತು ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಕೊಂಚೂರಿನ ಸವಿತಾ ಸಮಾಜ ಮಠದ ಧರಯ್ಯನಂದಾ ಸ್ವಾಮೀಜಿ( ಸವಿತಾನಂದ ಸ್ವಾಮೀಜಿ) ವಿರುದ್ದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀನಿವಾಸ ಸರಡಗಿಯ ಮಲ್ಲಿಕಾ ರ್ಜುನ ಕಿಳ್ಳಿ ಎಂಬುವವರು ಸಲ್ಲಿಸಿದ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ನಂದಿಕೂರ ತಾಂಡಾದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವರ ವಿರುದ್ಧ ಪೊಕ್ಸೊ ಕಾಯ್ದೆ ಅನುಸಾರ ಕ್ರಮ ಕೈಗೊಳ್ಳಬೇಕು ಮತ್ತು ಸಂತ್ರಸ್ತ ಬಾಲಕಿಯ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಜೂ.24ರಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಮಾತನಾಡಿದ್ದ ಧರಯ್ಯಾನಂದ ಸ್ವಾಮೀಜಿ ಅವರು, ಶಾಸಕ ಬಸವರಾಜ ಮತ್ತಿಮಡು ಅವರಿಗೆ ಜಾತಿ ನಿಂದನೆ ಮಾಡಿ, ಬಿಜೆಪಿ ನಾಯಕರೇ ನೀವು ಎಲ್ಲಿದ್ದೀರಿ? ನಿಮ್ಮ ಮನೆಯ ಹೆಣ್ಣು ಮಕ್ಕಳಿಗೆ ಅನ್ಯಾಯ ಆಗುವವರೆಗೂ ಮಾತನಾಡುವುದಿಲ್ಲವೇ ಎನ್ನುತ್ತಾ ಏಕವಚನದಲ್ಲೇ ನೀನು ಎಲ್ಲಿದ್ದಿ? ಬೆಟ್ಟಿಂಗ್ ನಲ್ಲಿ ಬ್ಯುಸಿ ಆಗಿರುವೆಯೇ ಎಂದು ಹೇಳಿದ್ದಾರೆ. ಶಾಸಕರು ದಲಿತ ಸಮಾಜದವರು ಎಂದು ಗೊತ್ತಿದ್ದರೂ ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.





