ಕೇಂದ್ರದ ಬಜೆಟ್ ಸಂಪೂರ್ಣ ಜನವಿರೋಧಿ: ಕೆ.ನೀಲಾ

ಕಲಬುರಗಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಸಂಪೂರ್ಣ ಜನವಿರೋಧಿಯಾಗಿದೆ ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಬಜೆಟ್ ಹೆಚ್ಚುತ್ತಿರುವ ಅಸಮಾನತೆಯನ್ನು ಮತ್ತು ಆರ್ಥಿಕ ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಗೊಳಿಸಲಿದೆ, ದುಡಿಯುವ ಜನರ, ಸಾಮಾಜಿಕವಾಗಿ ದಮನಕ್ಕೊಳಗಾದ ಜನವಿಭಾಗಗಳ ಹಾಗೂ ಒಟ್ಟಾರೆ ರಾಷ್ಟ್ರೀಯ ಆರ್ಥಿಕ ಹಿತಾಸಕ್ತಿಗಳನ್ನು ಬಲಿಕೊಟ್ಟಿದೆ ಎಂದು ಹೇಳಿದರು.
ಕೆಲವೇ ದೊಡ್ಡ ವ್ಯವಹಾರ ಸಮೂಹಗಳು ಮತ್ತು ಶ್ರೀಮಂತರು ಮತ್ತು ಧನಾಢ್ಯರ ಸಂಕುಚಿತ ಹಿತಾಸಕ್ತಿಗಳನ್ನು ಉತ್ತೇಜಿಸಲು ಮೋದಿ ಸರ್ಕಾರದ ಏನೇನೂ ವಿಮರ್ಶೆಯಿಲ್ಲದೆ ಬದ್ಧವಾಗಿದೆ ಎಂಬುದಕ್ಕೆ ಕಣ್ಣಿಗೆ ಕಟ್ಟುವಂತಿರುವ ಒಂದು ಸಾಕ್ಷಿ ಎಂದು ಟೀಕಿಸಿದ್ದಾರೆ.
2025–26 ಮತ್ತು 2026–27ರಲ್ಲಿ ವಿತ್ತೀಯ ಕೊರತೆಯನ್ನು ಕಡಿಮೆ ಮಾಡುವ ಗುರಿಯನ್ನು ಸಾಧಿಸುವುದು ಸ್ಪಷ್ಟವಾಗಿ ವೆಚ್ಚ ಕಡಿತದ ಮೇಲೆ ಅವಲಂಬಿತವಾಗಿದೆ ಮತ್ತು ಇದನ್ನು ಸಾಮಾನ್ಯವಾಗಿ ರೈತರು ಹಾಗೂ ಕಾರ್ಮಿಕರ ಮೇಲೆ ನಗ್ನದಾಳಿಯ ಮೂಲಕ ಸಾಧಿಸಲಾಗುತ್ತಿದೆ ಎಂದು ಆರೋಪಿಸಿದರು.
ಇನ್ನು 2025–26ರ ಬಜೆಟ್ ಅಂದಾಜುಗಳೊಂದಿಗೆ ಹೋಲಿಸಿದರೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಪಿಎಂ–ಪೋಷಣ್, ಪಿಎಂ–ಶ್ರೀ, ಪಿಎಂ–ಜಯ್, ಪಿಎಂ–ಎಂಎಸ್‌ವೈ, ಪಿಎಂಎವೈ (ಗ್ರಾಮೀಣ ಹಾಗೂ ನಗರ), ಬೆಳೆ ವಿಮಾ ಯೋಜನೆ ಇತ್ಯಾದಿ ಹಲವು ಕೇಂದ್ರ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳ ಅಡಿಯಲ್ಲಿ ವೆಚ್ಚಗಳನ್ನು ಕಡಿತಗೊಳಿಸಲಾಗಿದೆ.
ಕೃಷಿ ಮತ್ತು ಅದಕ್ಕೆ ಸಂಬಂಧಿತ ಚಟುವಟಿಕೆಗಳು, ಗ್ರಾಮೀಣ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಕಲ್ಯಾಣ ಕ್ಷೇತ್ರಗಳ ವೆಚ್ಚಗಳಿಗೂ ಕತ್ತರಿ ಹಾಕಲಾಗಿದೆ. ಲಿಂಗಾಧಾರಿತ ಬಜೆಟ್‌ನಲ್ಲಿ ರೂ. 51,144 ಕೋಟಿ ಕಡಿತ ಮಾಡಲಾಗಿದೆ. ಮುಂದಿನ 2026–27ರ ವರ್ಷದಲ್ಲಿ ರಸಗೊಬ್ಬರ, ಆಹಾರ ಮತ್ತು ಪೆಟ್ರೋಲಿಯಂ ಸಬ್ಸಿಡಿಗಳಲ್ಲಿ ಮತ್ತಷ್ಟು ಕಡಿತಗಳನ್ನು ಪ್ರಸ್ತಾಪಿಸಲಾಗಿದೆ. ಸರ್ಕಾರದ ಅಂಕಿಅಂಶಗಳೇ ಕೃಷಿ ಕ್ಷೇತ್ರವು ಹಣ ಕುಸಿತದ ಸನ್ನಿವೇಶವನ್ನು ಅಥವಾ ಹುಟ್ಟುವಳಿಗಳಿಗೆ ಬೆಲೆ ಪಡೆಯುವಲ್ಲಿ ಕುಸಿತವನ್ನು ತೋರಿಸುತ್ತಿರುವ ಸಮಯದಲ್ಲಿ, ಇದು ವಿಶೇಷವಾಗಿ ಕೃಷಿಯ ಮೇಲಿನ ದಾಳಿಯನ್ನು ಸೂಚಿಸುತ್ತದೆ ಎಂದು ವ್ಯಾಖ್ಯಾನಿಸಿದ್ದಾರೆ.
ಜಿಎಸ್‌ಟಿ ಆದಾಯಗಳ ಈಡೇರಿಕೆ ಚೆನ್ನಾಗಿಲ್ಲದಿರುವುದರಿಂದಾಗಿ ರಾಜ್ಯಗಳು ಈಗಾಗಲೇ ತೀವ್ರ ಹಣಕಾಸು ಕುಗ್ಗಿಕೆಯನ್ನು ಎದುರಿಸುತ್ತಿರುವ ಮತ್ತು ವಿ.ಬಿ–ಜಿ ರಾಮ್ ಜಿ (VB-G RAM G) ಮೂಲಕ ವೆಚ್ಚದ ಹೊರೆಯ ಒಂದು ಭಾಗವನ್ನು ರಾಜ್ಯಗಳ ಮೇಲೆ ಹೊರೆಸಲಾಗುತ್ತಿದೆ. ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಸಂಭವಿಸುತ್ತಿರುವ ಬೆಳವಣಿಗೆಗಳಿಂದ ಉದ್ಭವಿಸುತ್ತಿರುವ ಸಮಸ್ಯೆಗಳಿಗೆ ಈ ಬಜೆಟ್ ಅತ್ಯಂತ ಅಸಮರ್ಪಕ ಸ್ಪಂದನೆಯೂ ಆಗಿದೆ ಎಂದು ಹೇಳಿದ್ದಾರೆ.







