ಕೇಂದ್ರ ಸರಕಾರದಿಂದ ಮತದಾನದ ಹಕ್ಕು ಕಿತ್ತುಕೊಳ್ಳುವ ಸಂಚು ನಡೆಯುತ್ತಿದೆ : ಚಿಂತಕ ಶಿವಸುಂದರ್

ಕಲಬುರಗಿ : ಈಗಿನ ಕೇಂದ್ರ ಸರ್ಕಾರ ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸುತ್ತಿದೆ ಎಂದು ಖ್ಯಾತ ಅಂಕಣಕಾರ, ಚಿಂತಕ ಶಿವಸುಂದರ್ ಆರೋಪಿಸಿದರು.
ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಸ್ಲಂ ಜನಾಂದೋಲನ ಕರ್ನಾಟಕದ 16ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ “ಕಾರ್ಪೊರೇಟ್ ಜಾತಿವಾದಿ ನವನಗರಗಳಲ್ಲಿ ಸಾಮಾಜಿಕ ನ್ಯಾಯ ಮತ್ತು ಜನರ ಸವಾಲು” ವಿಷಯದ ರಾಜ್ಯಮಟ್ಟದ ಸಮಾವೇಶದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಅವರು ಮಾತನಾಡಿದರು.
ಇತ್ತೀಚೆಗೆ ಬಡವರು, ಮಹಿಳೆಯರು, ಮುಸ್ಲಿಮರು, ಅಸ್ಪೃಶ್ಯರು ಹಾಗೂ ಇತರೆ ಕೆಳವರ್ಗದವರು ಬಿಜೆಪಿಗೆ ಮತದಾನ ಮಾಡುತ್ತಿಲ್ಲ. ಇದರಿಂದ ಆತಂಕಗೊಂಡಿರುವ ಕೇಂದ್ರ ಸರ್ಕಾರ, ಮುಂದೆ ಯಾರೂ ಮತ ಹಾಕಬಾರದು ಎಂಬ ದುರುದ್ದೇಶದಿಂದ “ಎಸ್ಐಆರ್” (SIR) ನಂತಹ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ ಅವರು, ಈ ಕುರಿತು ಜನರು ಜಾಗೃತರಾಗಬೇಕೆಂದು ಕರೆ ನೀಡಿದರು.
ಎಸ್ಐಆರ್ ವಿಚಾರವಾಗಿ ಮನೆಗಳಿಗೆ ತೆರಳಿ “2002ರಲ್ಲಿ ಮತದಾನ ಮಾಡಿದ್ದೀರಾ?” ಎಂದು ಪ್ರಶ್ನಿಸಲಾಗುತ್ತಿದೆ. ಆಗಿನ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಬೇರೆ ದಾಖಲೆಗಳನ್ನು ಕೇಳಲಾಗುತ್ತದೆ. ಅವು ಹೊಂದಾಣಿಕೆಯಾಗದಿದ್ದರೆ ಇದೇ ದೇಶದಲ್ಲಿ ಹುಟ್ಟಿದ್ದೇವೆ ಎಂಬ ಪ್ರಮಾಣ ಪತ್ರವನ್ನು ಒದಗಿಸುವಂತೆ ಒತ್ತಾಯಿಸಲಾಗುತ್ತದೆ. ಈ ರೀತಿ ಅನಗತ್ಯ ದಾಖಲೆಗಳ ಮೂಲಕ ಜನರಿಂದ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಹೀಗೆ ಆದರೆ ಜನರು ಇದ್ದೂ ಸತ್ತಂತಾಗುತ್ತಾರೆ ಎಂದು ಎಚ್ಚರಿಸಿದರು.
“ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು” ಎಂಬ ತತ್ವದಂತೆ ಎಲ್ಲರಿಗೂ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಸಿಗಬೇಕು. ಸ್ಲಂ ಪ್ರದೇಶದ ಜನರಿಗೆ ಘನತೆಯಿಂದ ಬದುಕುವ ಹಾಗೂ ಉದ್ಯೋಗದ ಹಕ್ಕು ಸರ್ಕಾರಗಳು ನೀಡಬೇಕು. ಸ್ವಾತಂತ್ರ್ಯಕ್ಕೆ 75 ವರ್ಷವಾದರೂ ಅಸಮಾನತೆಯೇ ದೇಶದ ದೊಡ್ಡ ಪೀಡೆಯಾಗಿ ಉಳಿದಿದೆ ಎಂದು ಅವರು ಹೇಳಿದರು.
ಇನ್ನೂ ಕೊಳಚೆ ಪ್ರದೇಶಗಳಲ್ಲಿ ಜನರು ಬದುಕುತ್ತಿರುವಾಗ, ಪ್ರಧಾನಿ ಮೋದಿ ಬೆಂಬಲದಿಂದ ನಿಮಿಷಕ್ಕೆ 9 ಕೋಟಿ ರೂ. ಸಂಪಾದಿಸುವ ಅದಾನಿ–ಅಂಬಾನಿಗಳ ಅತಿರೇಕವೂ ಪ್ರಶ್ನಾರ್ಹವಾಗಿದೆ ಎಂದು ಅವರು ಟೀಕಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ, ಸ್ಲಂ ಜನಾಂದೋಲನದ ರಾಜ್ಯ ಸಂಚಾಲಕ ಎ.ನರಸಿಂಹ ಮೂರ್ತಿ, ಜನಬಲ ಟೈಮ್ಸ್ ಪತ್ರಿಕೆಯ ಸಂಪಾದಕ ಅಂಬಣ್ಣ ಆರೋಲಿಕರ್, ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆಯ ರಾಜ್ಯ ಸಂಚಾಲಕಿ ಚಂದ್ರಮ್ಮ , ಡಾ. ಪುಟ್ಟಮನಿ ದೇವಿದಾಸ, ಶರಣಬಸವೇಶ್ವರ ಸಂಸ್ಥಾನದ ಅಲ್ಲಮಪ್ರಭು ಪಾಟೀಲ್ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಪಾಲಿಕೆಯ ವಲಯ ಆಯುಕ್ತ ಗೌತಮ ಕಾಂಬಳೆ, ಅಂಬಿಕಾ ದೇವಿಂದ್ರ ನಾಡಗಿರಿ, ಶೋಭಾ ಕಮತಾರ್, ರಸೂಲ್ ನದಾಫ್, ಶೇಖರ್ ಬಾಬು, ಗೌರಮ್ಮ ಮಾಕಾ, ಹಣಮಂತ ಶಹಾಪೂರಕರ್, ವೆಂಕಮ್ಮ, ಜ್ಯೋತಿ ಕೋಳಿ, ಮಂಜುಬಾಯಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲಾ ಸಂಚಾಲಕಿ ರೇಣುಕಾ ಸರಡಗಿ ಸ್ವಾಗತಿಸಿದರು. ಇಮ್ತಿಯಾಝ್ ಮಾನ್ವಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜನಾರ್ದನ ಹಳ್ಳಿಬೆಂಚಿ ನಿರೂಪಿಸಿದರು. ಅರುಣ್ ವಂದಿಸಿದರು.
ಶೆಡ್ ತೆರವಿಗೆ ಜಾತಿ–ಧರ್ಮ ಕೇಳುವುದು ದುರಂತ:
ಯಾವುದೇ ನೋಟಿಸ್ ನೀಡದೆ ಕೋಗಿಲು ಪ್ರದೇಶದ 200 ಕುಟುಂಬಗಳ ಶೆಡ್‌ಗಳನ್ನು ತೆರವುಗೊಳಿಸಿದ ವೇಳೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಭೇಟಿ ನೀಡಿ “ನೀವು ಬಾಂಗ್ಲಾದೇಶದಿಂದ ಬಂದಿದ್ದೀರಾ?” ಎಂದು ಹೇಳಿರುವುದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ. ಸಮಾಜದಲ್ಲಿ ಮೃಗಗಳು ಹಾಗೂ ಮೃಗೀಯ ಪಕ್ಷಗಳು ಇರುವುದೇ ದುರಂತ. ಶೆಡ್ ತೆರವಿಗೆ ಜಾತಿ, ಧರ್ಮ ಕೇಳುತ್ತಿರುವುದು ಅತ್ಯಂತ ಖಂಡನೀಯ.
-ಶಿವಸುಂದರ್ (ಅಂಕಣಕಾರರು)







