ವೆನೆಜುವೆಲಾದ ಮೇಲೆ ಅಮೆರಿಕ ದಾಳಿಯ ಕುರಿತ ಕೇಂದ್ರದ ನಿಲುವು ಅವಮಾನಕಾರಿ: ಕೆ. ನೀಲಾ

ಕೆ. ನೀಲಾ
ಕಲಬುರಗಿ: ವೆನೆಜುವೆಲಾದ ವಿರುದ್ಧ ದಾಳಿ ನಡೆಸಿ ಆ ದೇಶದ ಅಧ್ಯಕ್ಷರು ಮತ್ತು ಅವರ ಪತ್ನಿಯನ್ನು ಅಪಹರಿಸಿದ್ದಕ್ಕೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಅಂಜುಬುರುಕತನದ ಹಾಗೂ ಅವಮಾನಕಾರಿ ನಿಲುವು ತಾಳಿದೆ ಎಂದು ಸಿಪಿಐ(ಎಂ) ಪಕ್ಷದ ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇತರ ರಾಷ್ಟ್ರಗಳ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವದ ರಕ್ಷಣೆಯ ಬಗ್ಗೆ ದೀರ್ಘಕಾಲದಿಂದ ತಳೆದುಕೊಂಡು ಬಂದಿರುವ ನಿಲುವಿಗೆ ತಕ್ಕುದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತದ ನಿಲುವು ಬ್ರೆಝಿಲ್ ಮತ್ತು ದಕ್ಷಿಣ ಆಫ್ರಿಕಾದಂತಹ ಬ್ರಿಕ್ಸ್ ಪಾಲುದಾರರು ತೆಗೆದುಕೊಂಡ ನಿಲುವಿಗೆ ತದ್ವಿರುದ್ಧವಾಗಿದೆ, ಅವರು ಅಮೆರಿಕದ ಆಕ್ರಮಣವನ್ನು ನಿಸ್ಸಂದಿಗ್ಧವಾಗಿ ಮತ್ತು ಬಲವಾಗಿ ಖಂಡಿಸಿದ್ದಾರೆ ಮತ್ತು ಅಧ್ಯಕ್ಷ ಮಡುರೊ ಮತ್ತು ಅವರ ಪತ್ನಿಯನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಈ ಅಮೆರಿಕ ಪರ ನಿಲುವು ಮೋದಿ ಸರ್ಕಾರದ ಬಲಪಂಥೀಯ ಸಿದ್ಧಾಂತ ಮತ್ತು ಟ್ರಂಪ್ ಆಡಳಿತದೊಂದಿಗೆ ಅದು ಹೊಂದಿರುವ ರಣತಂತ್ರದ ಸಂಬಂಧಗಳಿಗೆ ಅನುಗುಣವಾಗಿದೆ ಎಂದು ಆರೋಪಿಸಿದ್ದಾರೆ.
ಮೋದಿ ಸರ್ಕಾರ ಈ ಅವಮಾನಕಾರಿ ನಿಲುವನ್ನು ಕೈಬಿಡಬೇಕು ಮತ್ತು ವೆನೆಜುವೆಲಾದಲ್ಲಿ ಅಮೆರಿಕದ ಆಕ್ರಮಣ ಹಾಗೂ ಕಾನೂನುಬಾಹಿರ ಕೃತ್ಯಗಳ ವಿರುದ್ಧ ಸ್ಪಷ್ಟವಾಗಿ ಮಾತನಾಡಬೇಕು ಎಂದು ಕೆ.ನೀಲಾ ಅವರು ಆಗ್ರಹಿಸಿದ್ದಾರೆ.







