ಮುಖ್ಯಮಂತ್ರಿಗಳಿಗೆ ಹಿಂದುಳಿದ ವರ್ಗಕ್ಕೆ ನ್ಯಾಯ ಕೊಡಿಸುವ ಚಿಂತನೆ ಇಲ್ಲ : ಬಿ.ವೈ.ವಿಜಯೇಂದ್ರ

ಕಲಬುರಗಿ : ಸಿಎಂ ಸಿದ್ದರಾಮಯ್ಯನವರು ಜಾತಿಗಣತಿ ಬಗ್ಗೆ ಗುರುವಾರ ಸಚಿವ ಸಂಪುಟ ಸಭೆ ನಡೆಸಿದರು. ಆದರೆ ಅಲ್ಲಿ ಏನೂ ಆಗಲಿಲ್ಲ. ಮುಖ್ಯಮಂತ್ರಿಗಳಿಗೆ ಜಾತಿಗಣತಿ ಬಗ್ಗೆ ಇಚ್ಚಾಶಕ್ತಿ ಇಲ್ಲ, ಹಿಂದುಳಿದ ವರ್ಗಕ್ಕೆ ನ್ಯಾಯ ಕೊಡಿಸುವ ಚಿಂತನೆ ಇಲ್ಲ ಎಂಬುದು ಇದರಿಂದ ಖಾತ್ರಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ವರದಿ ಜಾರಿ ಮಾಡಲು ಹೊರಟಿರುವ ಸಿದ್ದರಾಮಯ್ಯ ಅವರ ಕ್ರಮಕ್ಕೆ ಜೈನ ಸ್ವಾಮೀಜಿ, ಮಡಿವಾಳ ಸ್ವಾಮೀಜಿ, ಕೋಲಿ ಸಮಾಜ ಸೇರಿದಂತೆ ಹಲವು ಸಮಾಜದವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಾಗಿದ್ದರೆ ಮುಖ್ಯಮಂತ್ರಿ ಯಾರಿಗೆ ನ್ಯಾಯ ಕೊಡಲು ಹೊರಟಿದ್ದಾರೆ ಎಂದು ಪ್ರಶ್ನಿಸಿದರು.
ಹಾಗೊಂದು ವೇಳೆ ಮುಖ್ಯಮಂತ್ರಿಗಳಿಗೆ ಪರಿಶಿಷ್ಟರು ಹಾಗೂ ಹಿಂದುಳಿದವರ ಬಗ್ಗೆ ಪ್ರೀತಿ ಇದ್ದಿದ್ದರೆ ಎಸ್ಸಿಪಿ-ಟಿಎಸ್ಪಿ ಪಾಲಿನ ಹಣ ವ್ಯಯ ಮಾಡುತ್ತಿರಲಿಲ್ಲ ಎಂದರು.
ಮುಖ್ಯಮಂತ್ರಿಗಳು ತಮ್ಮ ಅವಧಿಯಲ್ಲಿ ಹೊಸ ಅನುಭವ ಮಂಟಪ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ. ಬಸವಣ್ಣನವರ ಬಗ್ಗೆ ಮಾತಾಡಬೇಕಾದರೆ ಮುಖ್ಯಮಂತ್ರಿಗಳು ತಿಳಿದುಕೊಂಡು ಮಾತನಾಡಬೇಕು. ಬಸವಣ್ಣನವರು ನುಡಿದಂತೆ ನಡೆದವರು. ಇನ್ನೊಂದೆಡೆ ಸಿದ್ದರಾಮಯ್ಯ ಅವರು ವೀರಶೈವ ಲಿಂಗಾಯತರ ಮಧ್ಯೆ ಪ್ರತ್ಯೇಕ ಧರ್ಮದ ಬಗ್ಗೆ ಬೆಂಕಿ ಹಚ್ಚುವುದಕ್ಕೆ ಮುಂದಾಗಿದ್ದರು. ಸ್ವತಃ ಡಿಕೆಶಿಯವರೇ ನಾವು ಧರ್ಮ ಒಡೆಯುವುದಾಗಿ ಹೇಳಿದ್ದರು. ಹಾಗಾಗಿ ಅನುಭವ ಮಂಟಪ ಮುಗಿಸುವುದಕ್ಕಿಂತ ಹೆಚ್ಚಾಗಿ ನಿಮ್ಮ ನಡೆಯನ್ನು ಜನರು ಗಮನಿಸುತ್ತಿದ್ದಾರೆ ಎಂದರು.
ನೀವು ನಾಡಿನ ಮುಖ್ಯಮಂತ್ರಿಯೋ ಅಥವಾ ಮುಸ್ಲಿಮರ ಮುಖ್ಯಮಂತ್ರಿಯೋ ಎಂದು ಜನರು ಮಾತನಾಡುತ್ತಿದ್ದಾರೆ. ನಿಮ್ಮ ಅವಧಿಯಲ್ಲಿ ಅನುಭವ ಮಂಟಪ ಮುಗಿಸಲು ಡಿಕೆಶಿ ಬಿಡುತ್ತಾರೋ ಇಲ್ಲವೋ ಗೊತ್ತಿಲ್ಲ ಎಂದು ದೂರಿದರು.
ವಿದ್ಯಾರ್ಥಿಯೊಬ್ಬನ ಜನಿವಾರ ತೆಗೆಸಿ ಪರೀಕ್ಷೆ ಬರೆಯಿಸಿರುವ ವಿಚಾರ ಪ್ರಸ್ತಾಪಿಸಿದ ವಿಜಯೇಂದ್ರ ಹಿರಿಯಕ್ಕನ ಚಾಳಿ ಮನೆ ಮಂದಿಗೆ ಅನ್ನುವ ಹಾಗಾಗಿದೆ. ಬೇರೆ ಬೇರೆ ಸಮುದಾಯದ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಜನರೇ ಉತ್ತರ ನೀಡುತ್ತಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಛಲುವಾದಿ ನಾರಾಯಣ್ ಸ್ವಾಮಿ, ಎನ್.ರವಿಕುಮಾರ್, ಶಾಸಕ ಬಸವರಾಜ ಮತ್ತಿಮಡು, ಬಿ.ಜಿ.ಪಾಟೀಲ್ ಸೇರಿದಂತೆ ಮತ್ತಿತರರು ಹಾಜರಿದ್ದರು.







