ಕಲಬುರಗಿಗೆ ಬರುವ ಮೊದಲು ಮುಖ್ಯಮಂತ್ರಿಗಳು ನೆರೆ ಪರಿಹಾರ ಘೋಷಣೆ ಮಾಡಲಿ: ಬಿ.ವೈ ವಿಜಯೇಂದ್ರ

ಕಲಬುರಗಿ: ನೆರೆ ಹಾವಳಿ ಪ್ರದೇಶಗಳಿಗೆ ಭೇಟಿ ನೀಡಲು ಕಲಬುರಗಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲು ಈ ಭಾಗಕ್ಕೆ ಪರಿಹಾರ ಘೋಷಣೆ ಮಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಪ್ರವಾಹಪೀಡಿತ ಪ್ರದೇಶಗಳ ಕುರಿತಾಗಿ ವೈಮಾನಿಕ ಸಮೀಕ್ಷೆ ನಡೆಸುತ್ತಿರುವುದು ಸ್ವಾಗತಾರ್ಹ. ಆದರೆ, ಕೇವಲ ಹೆಲಿಕ್ಯಾಪ್ಟರ್ ನಲ್ಲಿ ಸಮೀಕ್ಷೆ ನಡೆಸಿದರೆ, ಜನರ ಬಳಿ ಹೋಗಿ ಅವರ ಕಷ್ಟಗಳನ್ನು ಕಣ್ಣಾರೆ ಕಂಡು ಕೇಳುವವರು ಯಾರು? ಎಂದು ಪ್ರಶ್ನಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಪ್ರವಾಹ ಬಂದು ಹಲವು ದಿನಗಳು ಕಳೆದು ಹೋಗಿವೆ, ಇದಕ್ಕೂ ಮೊದಲು ಬೆಳೆ ಹಾನಿಯಾಗಿ ರೈತರು ಪರಿಹಾರಕ್ಕಾಗಿ ಸರ್ಕಾರದತ್ತ ಮುಖ ಮಾಡಿದ್ದಾರೆ. ಇಲ್ಲಿಯತನಕ ಬರಲಾರದ ಸಚಿವರು ಈಗ ಬರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮೊದಲು ಇಲ್ಲಿನ ಜಿಲ್ಲಾ ಉಸ್ತುವಾರಿ, ಕಂದಾಯ ಹಾಗೂ ಕೃಷಿ ಸಚಿವರು ಎ.ಸಿಯಿಂದ ಹೊರಬಂದು ರೈತರ ನೋವನ್ನು ಅರಿತುಕೊಳ್ಳಲಿ, ಕೆಲವು ದಿನಗಳ ತನಕ ಸಚಿವರು ಬೆಂಗಳೂರಿಗೆ ಬರಬೇಡಿ ಎಂದು ಸಿಎಂ, ಸಚಿವರಿಗೆ ತಿಳಿಹೇಳಲಿ ಎಂದು ಆಗ್ರಹಿಸಿದ್ದಾರೆ.
ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಗಳಲ್ಲಿ ಪ್ರವಾಹ ಸೃಷ್ಟಿಯಾಗಿ ಅಪಾರ ಪ್ರಮಾಣದ ಬೆಳೆ, ಆಸ್ತಿ - ಪಾಸ್ತಿ ಹಾನಿಯಾಗಿವೆ. ಸರ್ಕಾರ ವಾಗ್ವಾದ ಮಾಡುವುದನ್ನು ಬಿಟ್ಟು ಮೊದಲು ರೈತರ ಹಿತಕ್ಕಾಗಿ ತುರ್ತು ಪರಿಹಾರ ಘೋಷಣೆ ಮಾಡಲಿ ಎಂದು ಒತ್ತಾಯಿಸಿದ್ದಾರೆ.
ಮೊದಲು ಖರ್ಗೆ ಅವರಿಗೆ ಪರಿಹಾರ ನೀಡಲಿ
ತಮ್ಮದೇ ಹೊಲದಲ್ಲಿ ಬೆಳೆ ಹಾನಿಯಾಗಿದೆ ಎಂದು ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ್ ಖರ್ಗೆ ಅಸಹಾಯಕ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲು ಖರ್ಗೆ ಅವರಿಗೆ ಪರಿಹಾರ ಘೋಷಣೆ ಮಾಡಲಿ, ಬಳಿಕ ಈ ಭಾಗದಲ್ಲಿ ಹಾನಿಗೀಡಾದ ಪ್ರತಿ ಎಕರೆ ಭೂಮಿಗೆ 25 ರಿಂದ 30 ಸಾವಿರ ರೂ. ಪರಿಹಾರ ಘೋಷಿಸಲಿ ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಸದ ಗೋವಿಂದ ಕಾರಜೋಳ, ವಿಧಾನ ಪರಿಷತ್ ವಿಪಕ್ಷ ನಾಯಕ ನಾರಾಯಣಸ್ವಾಮಿ, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ, ಮಾಜಿ ಸಂಸದ ಉಮೇಶ್ ಜಾಧವ್, ಅಶೋಕ್ ಬಗಲಿ, ಅಮರನಾಥ ಪಾಟೀಲ, ಚಂದು ಪಾಟೀಲ್, ಹರ್ಷಾನಂದ ಗುತ್ತೇದಾರ್ ಸೇರಿದಂತೆ ಮತ್ತಿತರರು ಇದ್ದರು.







