ಚಿಂಚೋಳಿ | ಶಾದಿಪುರ ಗ್ರಾಮ ಪಂಚಾಯತ್ ನ ಆಡಳಿತ ದೌರ್ಬಲ್ಯದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಆಕ್ರೋಶ

ಕಲಬುರಗಿ : ಚಿಂಚೋಳಿ ತಾಲ್ಲೂಕಿನ ಶಾದಿಪುರ ಗ್ರಾಮ ಪಂಚಾಯತ್ ಕಚೇರಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ನಿರ್ಲಕ್ಷ್ಯ ಮತ್ತು ಆಡಳಿತದ ದೌರ್ಬಲ್ಯದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಗ್ರಾಮ ಪಂಚಾಯತ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಜ್ಯೋತಿ ಅವರು ಕಚೇರಿಗೆ ನಿಯಮಿತವಾಗಿ ಹಾಜರಾಗದೇ, ಹಾಜರಾತಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಅವರ ನಿರ್ಲಕ್ಷ್ಯದಿಂದ ಕಚೇರಿಯ ದೈನಂದಿನ ಕಾರ್ಯಗಳು ವಿಳಂಬವಾಗುತ್ತಿದ್ದು, ಸಾರ್ವಜನಿಕ ಸೇವೆಗಳ ಗುಣಮಟ್ಟವು ಕುಸಿತಕ್ಕೀಡಾಗಿದೆ. ಹಳೆ ಕಾರ್ಯದರ್ಶಿಯವರು ನಿಷ್ಠೆಯಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದರು. ಆದರೆ ಇವರು ಎಲ್ಲಾ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೇ ರೀತಿಯಲ್ಲಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಸಹ ಅನಿಯಮಿತ ಹಾಜರಾತಿಯಿಂದ ಆಡಳಿತಾತ್ಮಕ ವ್ಯವಹಾರಗಳಲ್ಲಿ ಗೊಂದಲ ಉಂಟಾಗಿದ್ದು, ಸಾರ್ವಜನಿಕರಿಗೆ ಅನುಕೂಲವಾಗಬೇಕಾದ ಯೋಜನೆಗಳಲ್ಲಿ ವಿಳಂಬ ಉಂಟಾಗಿದೆ. ವಿಶೇಷವಾಗಿ ಮನರೇಗಾ ಯೋಜನೆಯಡಿಯಲ್ಲಿ ಕಾರ್ಮಿಕರಿಗೆ ಕೂಲಿ ಪಾವತಿಯಲ್ಲಿ ವಿಳಂಬವಾಗಿದೆ ಎಂದು ಸೇನೆಯ ಪದಾಧಿಕಾರಿಗಳು, ಚಿಂಚೋಳಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಲಿಂಬಾಜಿ ಚವ್ಹಾಣ್, ಜಗದೀಶ್, ಭಾಗ್ಯವಂತ್, ವಿಠಲ್ ಚವಾಣ್, ವಿನೋದ್ ಪವಾರ್, ಶಂಕರ್ ಪವಾರ್, ನರ್ಸಿಂಗ್ ಚೌಹಾಣ್, ಸುಭಾಷ್ ಸಿ ರಾಥೋಡ್, ಹೀರಾ ರಾಥೋಡ್, ಅರವಿಂದ್ ಜಾದವ್, ಪಂಡಿತ ಪವಾರ್ ಇದ್ದರು.







