ಚಿಂಚೋಳಿ | ಸರಕಾರಿ ಶಾಲೆಗಳ ವಿಲೀನ ಕೈಬಿಡಿ: ಗ್ರಾಮೀಣ ಮೂಲಸೌಕರ್ಯಕ್ಕೆ ಆದ್ಯತೆ ನೀಡುವಂತೆ ಆಗ್ರಹ

ಚಿಂಚೋಳಿ, ಡಿ.22: ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಸರ್ಕಾರದ ಧೋರಣೆ ಕೈಬಿಡಬೇಕು ಮತ್ತು ತಾಲೂಕಿನ ವಿವಿಧ ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮತ್ತು ಕನ್ನಡಪರ ಸಂಘಟನೆಗಳ ಮುಖಂಡರು ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ 25,000 ಸರ್ಕಾರಿ ಶಾಲೆ ಮುಚ್ಚುವ ನಿರ್ಧಾರ ತಕ್ಷಣ ಹಿಂಪಡೆಯಬೇಕು. ಬಡ ಮತ್ತು ದಲಿತ ವರ್ಗದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಪ್ರತಿ ಶಾಲೆಯಲ್ಲಿ ವಿಷಯವಾರು ಶಿಕ್ಷಕರನ್ನು ನೇಮಿಸಬೇಕು. ಸಮುದಾಯ ಆರೋಗ್ಯ ಕೇಂದ್ರಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನಾಗಿ ಮಾಡುವ ನೀತಿ ಕೈಬಿಡಬೇಕು. ತಜ್ಞ ವೈದ್ಯರ ನೇಮಕಾತಿ ಮೂಲಕ ಗ್ರಾಮೀಣ ಆರೋಗ್ಯ ಸೇವೆಯನ್ನು ಬಲಪಡಿಸಬೇಕು. ನಮ್ಮ ಹೊಲ ನಮ್ಮ ರಸ್ತೆ’ ಯೋಜನೆಯಡಿ ಗಾರಂಪಳ್ಳಿ-ಕನಕಪುರ ಹಾಗೂ ಗೌಡನಹಳ್ಳಿ-ಗಾರಂಪಳ್ಳಿ ರಸ್ತೆಗಳನ್ನು ಕೂಡಲೇ ಅಭಿವೃದ್ಧಿಪಡಿಸಬೇಕು.ಹುಮನಾಬಾದ್ ರಾಜ್ಯ ಹೆದ್ದಾರಿಯಲ್ಲಿ ಅರ್ಧಕ್ಕೆ ನಿಂತಿರುವ ಸೇತುವೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ದಿನಕ್ಕೆ ಎರಡು ಬಾರಿ ಜಿಪಿಎಸ್ ಹಾಜರಾತಿ ಪಡೆಯುವ ಪದ್ಧತಿಯಿಂದ ತೊಂದರೆಯಾಗುತ್ತಿದ್ದು, ಒಂದು ಬಾರಿ ಮಾತ್ರ ಹಾಜರಾತಿ ಪಡೆಯುವಂತೆ ನಿಯಮ ರೂಪಿಸಬೇಕು ಎಂದು ಒತ್ತಡ ಹಾಕಿದರು.
ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆಯ ಮುಖಂಡರು ಎಚ್ಚರಿಸಿದರು.
ಶ್ರೀಮಂತ ಕಟ್ಟಿಮನಿ, ಕೆ ಎಮ್ ಬಾರಿ, ಹನುಮಂತ ಕೆ. ಪೂಜಾರಿ, ಗೋಪಾಲ ಎಂ.ಪಿ, ವಿಠ್ಠಲ ಕುಸಳೆ, ಗಿರಿರಾಜ ನಾಟೀಕರ್, ಸಾಜಿದ್ ಮಿಯಾ, ಸತೀಶ್ ಕನಕಪುರ, ಶಿವಕುಮಾರ್ ಅಂಬುಲಗಿ, ರಾಜು ತೋಡಿ, ಸುರೇಶ ಕುಮಾರ್ ದಂಡಿನ, ರಾಹುಲ್, ಸುಭಾಷ್, ಮಹೇಶ್, ಸುನೀಲ್ ಸೇರಿ ಇತರರಿದ್ದರು.







