ಚಿಂಚೋಳಿ | ಪ್ರತಿಭಟನೆ ವೇಳೆ ಪಿಡಿಒ ಮೇಲೆ ಹಲ್ಲೆ ಆರೋಪ : ಕ್ರಮಕ್ಕೆ ಆಗ್ರಹ

ಚಿಂಚೋಳಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಹರಿದು ಮೂರು ವರ್ಷದ ಮಗು ಮೃತಪಟ್ಟ ಘಟನೆ ಖಂಡಿಸಿ ನಡೆದ ಪ್ರತಿಭಟನೆ ವೇಳೆ ಮಿರಿಯಾಣ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮಲ್ಲಿಕಾರ್ಜುನ ಗಿರಿ ಅವರ ಮೇಲೆ ಹಲ್ಲೆ ನಡೆಸಿರುವುದನ್ನು ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಜಗದೇವ ಗೌತಮ್ ಹಸರಗುಂಡಗಿ ತೀವ್ರವಾಗಿ ಖಂಡಿಸಿದ್ದಾರೆ.
ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಚವ್ಹಾಣ ಅವರಿಗೆ ಮನವಿ ಸಲ್ಲಿಸಿದ ಅವರು, ಕಲ್ಲೂರು ರೋಡ್ ಗ್ರಾಮದಲ್ಲಿ ಚಿಂಚೋಳಿ–ಮಹೆಬೂಬನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಹರಿದು ಮಗು ಮೃತಪಟ್ಟಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ. ಘಟನೆಯಿಂದ ಆಕ್ರೋಶಗೊಂಡು ನಡೆದ ಪ್ರತಿಭಟನೆ ವೇಳೆ ಘಟನೆಗೆ ನೇರ ಸಂಬಂಧವಿಲ್ಲದ ಪಿಡಿಒ ಅವರನ್ನು ಗುರಿಯಾಗಿಸಿಕೊಂಡು ಹಲ್ಲೆ ನಡೆಸಿರುವುದು ಖಂಡನೀಯ ಎಂದು ಹೇಳಿದರು.
ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣ, ನಿರ್ವಹಣೆ, ದುರಸ್ತಿ ಹಾಗೂ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಜವಾಬ್ದಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ್ದಾಗಿದೆ. ಹೀಗಿರುವಾಗ ಹೆದ್ದಾರಿ ಅಪಘಾತದ ಹಿನ್ನೆಲೆಯಲ್ಲಿ ರಜೆಯಲ್ಲಿದ್ದ ಗ್ರಾಮ ಪಂಚಾಯಿತಿ ಅಧಿಕಾರಿಯನ್ನು ಸ್ಥಳಕ್ಕೆ ಕರೆಸಿ ನಿಂದಿಸಿ ಹಲ್ಲೆ ನಡೆಸಿರುವುದು ಸರಿಯಲ್ಲ. ಸಾರ್ವಜನಿಕ ಸಮಸ್ಯೆಗಳ ಕುರಿತು ಅಧಿಕಾರಿಗಳಿಂದ ಉತ್ತರ ಕೇಳುವ ಹಕ್ಕು ಜನರಿಗಿದೆಯೇ ಹೊರತು, ಹಲ್ಲೆ ನಡೆಸುವುದಕ್ಕೆ ಯಾವುದೇ ಸಮರ್ಥನೆ ಇಲ್ಲ ಎಂದು ಅಭಿಪ್ರಾಯಪಟ್ಟರು.
ಪಿಡಿಒ ಮಲ್ಲಿಕಾರ್ಜುನ ಗಿರಿ ಅವರ ಮೇಲಿನ ಹಲ್ಲೆ ಪ್ರಕರಣವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕು. ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಸರ್ಕಾರಿ ಅಧಿಕಾರಿಗಳು ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಲು ಸೂಕ್ತ ರಕ್ಷಣೆ ಒದಗಿಸುವುದರ ಜತೆಗೆ ಹಲ್ಲೆಗೊಳಗಾದ ಅಧಿಕಾರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಜುಕುಮಾರ ಯಪಕಪಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.






