ಕಲಬುರಗಿ | ಆಸ್ಟ್ರೇಲಿಯಾದಲ್ಲಿ ಚಿಂಚೋಳಿ ಮೂಲದ ವೈದ್ಯ ಅನುಮಾನಾಸ್ಪದ ಸಾವು

ಡಾ.ರಾಹುಲ್ ಚಂದ್ರಪ್ರಕಾಶ ರಗಟೆ (30)
ಕಲಬುರಗಿ : ಚಿಂಚೋಳಿ ತಾಲೂಕಿನ ಚಿಮ್ಮನಚೋಡ ಗ್ರಾಮದ ತಜ್ಞ ವೈದ್ಯ ಡಾ.ರಾಹುಲ್ ಚಂದ್ರಪ್ರಕಾಶ ರಗಟೆ (30) ಆಸ್ಟ್ರೇಲಿಯಾದ ಸಿಡ್ನಿಯಿಂದ ದೂರದಲ್ಲಿರುವ ಗೋಲ್ಡ್ಕೋಸ್ಟ್ ನಗರದ ಚೆವಾನ್ ಸೇತುವೆ ಸಮೀಪ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೀದರ್ ಜಿಲ್ಲೆಯ ನಿವೃತ್ತ ಜಿಲ್ಲಾ ಸರ್ಜನ್ ಡಾ.ಚಂದ್ರಪ್ರಕಾಶ ರಗಟೆ ಅವರ ಪುತ್ರ ರಾಹುಲ್ ರಗಟೆ ಗುರುವಾರ ಬೆಳಿಗ್ಗೆ 7.10ಕ್ಕೆ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ಹೇಳಿವೆ.
ʼನೀರಿನಲ್ಲಿ ಈಜುತ್ತಿರುವುದನ್ನು ಸ್ಥಳೀಯರು ನೋಡಿದ್ದಾರೆ. ಆದರೆ, ಅವರು ನೀರಿನಲ್ಲಿ ಮುಳುಗಿದ ಬಳಿಕ ಮತ್ತೆ ಮೇಲೆ ಬಂದಿಲ್ಲ, ಕ್ವೀನ್ಸ್ ಲ್ಯಾಂಡ್ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ' ಎಂದು ಅಲ್ಲಿನ ಸ್ಕೈ ನ್ಯೂಸ್.ಕಾಮ್ ವರದಿ ಮಾಡಿತ್ತು. ಶೋಧ ಕಾರ್ಯಾಚರಣೆ ನಡೆಸಿದ ಬಳಿಕ ಡಾ.ರಾಹುಲ್ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ʼಡಾ.ರಾಹುಲ್ ರಗಟೆ ಅವರು ಆಸ್ಟ್ರೇಲಿಯಾಕ್ಕೆ ಹೋಗುವ ಮೊದಲು ಯುನೈಟೆಡ್ ಕಿಂಗ್ಡಂ ರಿಂಗ್ ಹ್ಯಾಂನ ವಿಶ್ವವಿದ್ಯಾಲಯ ಆಸ್ಪತ್ರೆಯ ರೆಜಿಸ್ಟ್ರಾರ್ ಆಗಿದ್ದರು. ಇಲ್ಲಿಂದ ಅವರು ಆಸ್ಟ್ರೇಲಿಯಾಕ್ಕೆ ತೆರಳಿದ್ದು, ಸಿಡ್ನಿಯಲ್ಲಿ ಕೆಲವು ದಿನ ಇದ್ದು ಜೂನ್ 1ರಂದು ಗೋಲೊಕೋಸ್ಟ್ ನಗರದಲ್ಲಿ ಸೇವೆಗೆ ಹಾಜರಾಗಿದ್ದರು ಎನ್ನಲಾಗಿದೆ. ಅಂದು ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಡಾ.ರಾಹುಲ್ ಅವರ ಸಾವು ಸಂಭವಿಸಿರುವ ಬಗ್ಗೆ ಅನುಮಾನಗಳಿದ್ದು, ಪೊಲೀಸರ ತನಿಖೆಯ ನಂತರವೇ ಸತ್ಯ ಬಹಿರಂಗವಾಗಲಿದೆ' ಎಂದು ಡಾ.ರಾಹುಲ್ ಅವರ ಆಪ್ತ ಶಿವಕುಮಾರ ಚೆಟ್ಟಿ ಹೇಳಿದ್ದಾರೆ.
ವಿಜಯಶ್ರೀ- ಡಾ.ಚಂದ್ರಪ್ರಕಾಶ ರಗಟೆ ದಂಪತಿಗೆ ಇಬ್ಬರು ಪುತ್ರರು, ಪುತ್ರಿ ಇದ್ದು ಎಲ್ಲರೂ ತಜ್ಞ ವೈದ್ಯರಾಗಿದ್ದಾರೆ.
ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಅವರು ಆಸ್ಟ್ರೇಲಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳ ಜೊತೆಗೆ ಮಾತನಾಡಿ, ʼಡಾ.ರಾಹುಲ್ ಅವರ ಮೃತದೇಹ ಭಾರತಕ್ಕೆ ಕಳುಹಿಸಲು ಅಗತ್ಯ ಕ್ರಮ ಕೈಗೊಳ್ಳಬೇಕುʼ ಎಂದು ತಿಳಿಸಿದ್ದಾರೆ.