ಚಿಂಚೋಳಿ | ಬೌದ್ಧ ಧರ್ಮವು ಶಾಂತಿ, ಸಮಾನತೆಯ ಸಂದೇಶ ಸಾರುತ್ತದೆ: ಶಾಸಕ ಡಾ.ಅವಿನಾಶ್ ಜಾಧವ್
ಪ್ರಥಮ ಬೌದ್ಧ ಧಮ್ಮ ಪರಿಷತ್ ಕಾರ್ಯಕ್ರಮ

ಚಿಂಚೋಳಿ: ಪಟ್ಟಣದ ಅಂಬೇಡ್ಕರ್ ಭವನದಲ್ಲಿ ದೀಕ್ಷಾ ಬುದ್ಧ ವಿಹಾರ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ.), ತುಮಕುಂಟಾ ಹಾಗೂ ಭಾರತ ಭ್ರಮಣ ಭಿಕ್ಕು ಸಂಘ (ರಿ.), ಹೊಸ ಮುಂಬೈ ಇವರ ಆಶ್ರಯದಲ್ಲಿ ಪ್ರಥಮ ಬೌದ್ಧ ಧಮ್ಮ ಪರಿಷತ್ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಡಾ. ಅವಿನಾಶ್ ಜಾಧವ್, ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ಧರ್ಮ ಯಾವುದಾದರೂ ಇದ್ದರೆ ಅದು ಬೌದ್ಧ ಧರ್ಮವಾಗಿದೆ. ಈ ಧರ್ಮವು ಮನುಷ್ಯರನ್ನು ಪರಸ್ಪರ ಸಮಾನತೆಯಿಂದ ಕಾಣುವಂತೆ ಮಾಡಿದೆ. ವಿದೇಶಗಳಲ್ಲಿ ಯುದ್ಧಗಳು ನಡೆಯುತ್ತಿದ್ದು, ಹಲವು ಕಡೆ ಅಶಾಂತಿ ನೆಲೆಸಿದೆ. ಆದರೆ ಬುದ್ಧನ ಧರ್ಮ ಇರುವೆಡೆ ಶಾಂತಿ ಮತ್ತು ಸಮಾನತೆ ಇರುತ್ತದೆ. ಭಗವಾನ್ ಬುದ್ಧರನ್ನು ವಿಷ್ಣುವಿನ ಒಂಬತ್ತನೇ ಅವತಾರ ಎಂದು ಹೇಳಲಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗೌತಮ ಬಿ. ಬೊಮ್ಮನಹಳ್ಳಿ, ತಥಾಗತ ಗೌತಮ ಬುದ್ಧರು ಮನುಷ್ಯರು ಸೇರಿದಂತೆ ಸಕಲ ಜೀವಿಗಳನ್ನು ಸಮಾನವಾಗಿ ಕಂಡಿದ್ದಾರೆ. ಬೌದ್ಧ ಧರ್ಮವನ್ನು ಅಳಿಸಿಹಾಕಲು ದೇಶದ ಮೇಲೆ ಪರಕೀಯರು 23 ಬಾರಿ ದಾಳಿ ನಡೆಸಿ ಕುತಂತ್ರ ಮಾಡಿದ್ದಾರೆ ಎಂದು ಹೇಳಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಸಂದರ್ಭದಲ್ಲಿ, ‘ನಾನು ಮೂಲ ಮನೆಗೆ ಹೊರಟಿದ್ದೇನೆ, ಆದರೆ ಧರ್ಮಾಂತರವಾಗಿಲ್ಲ. ಈ ದೇಶದಲ್ಲಿ ಮೊದಲಿನಿಂದಲೂ ಇದ್ದ ಧಮ್ಮವೆಂದರೆ ಅದು ಬೌದ್ಧ ಧರ್ಮ ಮಾತ್ರ. ನಾನು ಮರಳಿ ಮನೆಗೆ ಹೋಗುತ್ತಿದ್ದೇನೆ, ಇದು ನನ್ನ ಪುನರ್ಜನ್ಮ’ ಎಂದು ಹೇಳಿದ್ದರು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಭಂತೇಜಿ ಆಶೀರ್ವಚನ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಬೌದ್ಧ ಉಪಾಸಕರು ಮತ್ತು ಉಪಾಸಕಿಯರು ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ಪುಷ್ಪಾರ್ಚನೆ ಸಲ್ಲಿಸುತ್ತಾ ಸಾಗಿದ ಬೌದ್ಧ ಧಮ್ಮ ಅನುಯಾಯಿಗಳು ಗಮನ ಸೆಳೆದರು.
ಕಾರ್ಯಕ್ರಮವನ್ನು ಅಶೋಕ ಹೂವಿನಬಾವಿ ನಿರೂಪಿಸಿದರು. ಈ ಸಂದರ್ಭದಲ್ಲಿ ಹಿರಿಯ ಮುಖಂಡ ಗೋಪಾಲ ರಾವ್ ಕಟ್ಟಿಮನಿ, ಶಾಮರಾವ ಕೊರವಿ, ಆನಂದ ಕುಮಾರ ಟೈಗರ್, ಪಾಂಡುರಂಗ ಲೋಡ್ಡನೂರ್, ವೈಜನಾಥ ಮಿತ್ರ, ಮಾರುತಿ ಅಪ್ಪಣೋರ್, ವಿಜಯಕುಮಾರ ಚೆಂಗಟಿ, ಶ್ರೀಮಂತ ಕಟ್ಟಿಮನಿ, ಕೆ.ಎಂ. ಬಾರಿ, ದೇವೇಂದ್ರಪ್ಪ ಹೋಳ್ಕರ್ ಸೇರಿದಂತೆ ವಿವಿಧ ರಾಜಕೀಯ ಮುಖಂಡರು ಹಾಗೂ ಬೌದ್ಧ ಉಪಾಸಕರು ಮತ್ತು ಉಪಾಸಕಿಯರು ಉಪಸ್ಥಿತರಿದ್ದರು.






