ಚಿಂಚೋಳಿ | ಮೂಲಭೂತ ಸೌಲಭ್ಯಗಳಿಗಾಗಿ ಆಗ್ರಹ: ನಾಗಯಿದಲಾಯಿ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರಿಂದ ಹಕ್ಕೊತ್ತಾಯ ಪತ್ರ ಸಲ್ಲಿಕೆ

ಚಿಂಚೋಳಿ: ತಾಲೂಕಿನ ನಾಗಯಿದಲಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ತಲೆದೋರಿರುವ ಮೂಲಭೂತ ಸಮಸ್ಯೆಗಳನ್ನು ಕೂಡಲೇ ಪರಿಹರಿಸುವಂತೆ ಒತ್ತಾಯಿಸಿ, ಗ್ರಾಮಸ್ಥರು ಹಾಗೂ ಮುಖಂಡರು ಶನಿವಾರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಗ್ರಾಮಗಳಲ್ಲಿನ ಕುಡಿಯುವ ನೀರು, ಸ್ವಚ್ಛತೆ, ಬೀದಿ ದೀಪ, ಶಿಕ್ಷಣ, ಉದ್ಯೋಗ ಹಾಗೂ ಪಿಂಚಣಿ ಸೇರಿದಂತೆ ಹಲವು ಸಮಸ್ಯೆಗಳನ್ನು ಮನವಿಯಲ್ಲಿ ಪ್ರಸ್ತಾಪಿಸಿದ ಗ್ರಾಮಸ್ಥರು, ಅಧಿಕಾರಿಗಳು ಕೂಡಲೇ ಸ್ಪಂದಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.
ನಾಗಯಿದಲಾಯಿ ಗ್ರಾಮದಲ್ಲಿ ವಯೋವೃದ್ಧರಿಗಾಗಿ ಹಗಲು ಯೋಗಕ್ಷೇಮ ಕೇಂದ್ರ ಆರಂಭಿಸಬೇಕು. ಕೊಳ್ಳೂರ ಗ್ರಾಮದಲ್ಲಿ ಸಾಮೂಹಿಕ ಶೌಚಾಲಯ ನಿರ್ಮಿಸಬೇಕು. ಕುಸರಂಪಳ್ಳಿ ಗ್ರಾಮದ ಎಸ್ಸಿ, ಎಸ್ಟಿ ಕಾಲೋನಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ, ಲಕ್ಷ್ಮೀ ದೇವಾಲಯ, ಚರ್ಚ್ ಹಾಗೂ ಹಳೆ ಓಣಿಯ ಬಳಿಯ ಕೆಟ್ಟುಹೋಗಿರುವ ಹೈಮಾಸ್ಟ್ ದೀಪಗಳನ್ನು ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿದರು.
ಇದಲ್ಲದೆ, ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು. ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದರ ಜೊತೆಗೆ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು. ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ನಿರಂತರವಾಗಿ ಕೆಲಸ ಒದಗಿಸಬೇಕು. ಕಡಿತಗೊಂಡಿರುವ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲರ ಪಿಂಚಣಿಯನ್ನು ಮನೆಮನೆಗೆ ತೆರಳಿ ದಾಖಲೆ ಪರಿಶೀಲಿಸುವ ಮೂಲಕ ಮರುಪ್ರಾರಂಭಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಬೇಡಿಕೆಗಳನ್ನು ಶೀಘ್ರ ಈಡೇರಿಸದಿದ್ದರೆ ನಾಗಯಿದಲಾಯಿ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಮಾರುತಿ ಗಂಜಗಿರಿ, ರವಿಕುಮಾರ್ ರುಸ್ತಂಪೂರ, ಪ್ರದೀಪ್ ಕೊಳ್ಳೂರ, ಮಹೇಶ ಕುಸರಂಪಳ್ಳಿ, ಮೋಹನ ಐನಾಪೂರ, ಅಮರನಾಥ ಹೂವಿನಭಾವಿ, ಮೋಭೀನ್ ಚಿಂಚೋಳಿ, ರಮೇಶ ಕುಸರಂಪಳ್ಳಿ, ಸುಮಿತ್ರ ಕೊಳ್ಳೂರ ಸೇರಿದಂತೆ ಜಗಮ್ಮಾ, ಕಾಶಮ್ಮಾ, ಆಶಾರಾಣಿ, ಅಂಬಿಕಾ, ರಂಗಮ್ಮಾ, ಯಶೋಧಾ, ಸುತ್ಯಮ್ಮಾ, ಸುನಿತಾ, ಚಂದ್ರಮ್ಮಾ, ಈರಮ್ಮಾ, ನಾಗಮ್ಮ, ವೈಜನಾಥ, ಪರಮೇಶ್ವರ, ರಾಜಕುಮಾರ್, ಲೋಕೇಶ್, ಪವನಕುಮಾರ, ಆನಂದ, ನೀಲಪ್ಪಾ, ಅಬ್ರಾಹಂ, ರಾಜು ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.






