ಚಿಂಚೋಳಿ | ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆ ವಿರುದ್ಧ ರೈತರ ಪ್ರತಿಭಟನೆ

ಕಲಬುರಗಿ: ಚಿಂಚೋಳಿ ತಾಲೂಕಿನ ಕಬ್ಬು ಬೆಳೆಗಾರರಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು ಹಾಗೂ ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ತೀರ್ಮಾನದಂತೆ ನಡೆದುಕೊಳ್ಳಬೇಕು ಎಂದು ಆಗ್ರಹಿಸಿ, ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ತಾಲೂಕ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಚಿಂಚೋಳಿ ಪಟ್ಟಣದ ಸಿದ್ದಸಿರಿ ಎಥೆನಾಲ್ ಪವರ್ ಘಟಕದ ಎದುರು ಧರಣಿ ನಡೆಸಲಾಯಿತು.
ನವೆಂಬರ್ 15ರಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಕಬ್ಬಿಗೆ ಪ್ರತಿ ಟನ್ ಗೆ 2,950 ರೂ. ಹಾಗೂ 50 ರೂ. ಹೆಚ್ಚುವರಿ ಪ್ರೋತ್ಸಾಹ ಧನ ನೀಡಲು ಸಕ್ಕರೆ ಕಾರ್ಖಾನೆ ಮಾಲಕರು ಒಪ್ಪಿಗೆ ಸೂಚಿಸಿ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಆದರೆ, ಸಿದ್ದಸಿರಿ ಕಾರ್ಖಾನೆಯು ಈ ಒಪ್ಪಂದವನ್ನು ಮುರಿದು ರೈತರ ಖಾತೆಗಳಿಗೆ ಕೇವಲ 2,550 ರೂ. ಜಮಾ ಮಾಡುವ ಮೂಲಕ ವಂಚನೆ ಮಾಡುತ್ತಿದೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದಸಿರಿ ಕಂಪೆನಿಯ ಸಂಸ್ಥಾಪಕ ಬಸನಗೌಡ ಪಾಟೀಲ ಯತ್ನಾಳ್ ಕಂಪೆನಿ ಸ್ಥಾಪಿಸುವಾಗ ಕಲಬುರಗಿ ಜಿಲ್ಲೆಯ ರೈತರಿಗೆ ಇತರ ಕಂಪೆನಿಗಳಿಗಿಂತ 100 ರೂ. ಅಧಿಕ ಬೆಲೆ ನೀಡುವುದಾಗಿ ಮಾತು ಕೊಟ್ಟಿದ್ದರು. ಆದರೆ ಈಗ ಆ ಮಾತು ತಪ್ಪಿ ನಡೆಯುತ್ತಿದ್ದಾರೆ ಎಂದು ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಆರೋಪಿಸಿದರು.
ಚಿಂಚೋಳಿ ಮತ್ತು ಕಾಳಗಿ ಅವಳಿ ತಾಲೂಕಿನ ರೈತರು ಬೆಳೆದ ಕಬ್ಬಿಗೆ ಮೊದಲ ಆದ್ಯತೆ ನೀಡಿ ಕಬ್ಬು ನುರಿಸಬೇಕು ಮತ್ತು ಕಾರ್ಖಾನೆಯಲ್ಲಿ ಸ್ಥಳೀಯ ಅರ್ಹ ಯುವಕರಿಗೆ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.ಕಬ್ಬು ಸಾಗಣೆ ಮಾಡುತ್ತಿರುವ ವಾಹನ ಚಾಲಕರ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯ ನಂತರ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಹಾಗೂ ಪವರ್ ಎಥೆನಾಲ್ ಘಟಕದ ಜಿ.ಎಂ. ದಯಾನಂದ ಬಣಗಾರ ಅವರಿಗೆ ರೈತರು ಮನವಿ ಪತ್ರ ಸಲ್ಲಿಸಿದರು. ತಹಶೀಲ್ದಾರ್ ಅವರು ಕಾರ್ಖಾನೆ ಮಾಲಕರೊಂದಿಗೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದರು.
ರೈತ ಹಿತರಕ್ಷಣಾ ಸಮಿತಿ ತಾಲೂಕು ಅಧ್ಯಕ್ಷ ಅಬ್ದುಲ್ ಬಾಸಿತ್, ಪ್ರಮುಖರಾದ ಆರ್. ಗಣಪತ ರಾವ್, ಲಕ್ಷ್ಮಣ ಅವಂಟಿ, ನಾಗೇಶ ಗುಣಾಜಿ, ಸುಭಾಷ್ ಎಂಪಳ್ಳಿ, ಶಬ್ಬೀರ್ ಅಹ್ಮದ್ ಹಾಗೂ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.







