Chincholi | ಸುಲೇಪೇಟೆಯಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಜಯಂತಿ ಅದ್ದೂರಿ ಆಚರಣೆ

ಚಿಂಚೋಳಿ: ತಾಲ್ಲೂಕಿನ ಪ್ರಮುಖ ವಾಣಿಜ್ಯ ಕೇಂದ್ರ ಹಾಗೂ ಹೋಬಳಿ ಘಟಕವಾದ ಸುಲೇಪೇಟೆಯಲ್ಲಿ ಸಿದ್ಧಾರ್ಥ ಯುವಕ ಮಂಡಳಿ ಹಾಗೂ ನಮೋ ಬುದ್ಧಾಯ ತರುಣ ಸಂಘದ ವತಿಯಿಂದ ಆಯೋಜಿಸಿದ್ದ ಬುದ್ಧ, ಬಸವ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಜಯಂತೋತ್ಸವ ಕಾರ್ಯಕ್ರಮ ಶನಿವಾರ ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ನಡೆಯಿತು.
ಗ್ರಾಮದ ತೇರು ಮೈದಾನದಲ್ಲಿ ನಡೆದ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆಯಿಂದಲೇ ವಿವಿಧ ವಾದ್ಯ ಮೇಳಗಳೊಂದಿಗೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್, ಮಹಾತ್ಮ ಗೌತಮ ಬುದ್ಧ ಹಾಗೂ ಜಗಜ್ಯೋತಿ ಬಸವಣ್ಣನವರ ಭಾವಚಿತ್ರಗಳ ಭವ್ಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಭ್ರಮದಿಂದ ನಡೆಯಿತು. ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆದ ಮೆರವಣಿಗೆ ಸಾರ್ವಜನಿಕರ ಗಮನ ಸೆಳೆಯಿತು.
ಬೆಳಮಗಿ ಬುದ್ಧ ವಿಹಾರದ ಪೂಜ್ಯ ಭಂತೆ ಅಮರ ಜ್ಯೋತಿ ಅವರು ಬುದ್ಧನ ಪಂಚಶೀಲ ತತ್ವಗಳನ್ನು ಪಠಿಸಿ ಶಾಂತಿ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳ ಸಂದೇಶ ಸಾರಿದರು.
ಸಂಜೆ ನಡೆದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸೇಡಂ ಕ್ಷೇತ್ರದ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್, “ಇಂದು ಕೆಲ ರಾಜಕೀಯ ಪಕ್ಷಗಳು ಹಾಗೂ ವ್ಯಕ್ತಿಗಳು ರಾಜಕೀಯ ಲಾಭಕ್ಕಾಗಿ ಡಾ. ಅಂಬೇಡ್ಕರ್ ಅವರ ಹೆಸರನ್ನು ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ. ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಭಾರತದ ಸಂವಿಧಾನವೇ ಶ್ರೇಷ್ಠ ಗ್ರಂಥವಾಗಬೇಕು” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಭೀಮರಾವ್ ಟಿ.ಟಿ., “ಮಹಿಳೆಯರು ಹಾಗೂ ದೀನ ದಲಿತರ ಹಕ್ಕುಗಳಿಗಾಗಿ ಡಾ. ಅಂಬೇಡ್ಕರ್ ತಮ್ಮ ಮಂತ್ರಿ ಸ್ಥಾನವನ್ನೇ ತ್ಯಾಗ ಮಾಡಿದರು. ಅವರ ತ್ಯಾಗ ಮತ್ತು ಹೋರಾಟವನ್ನು ಸಮಾಜ ಸದಾ ಸ್ಮರಿಸಬೇಕು” ಎಂದು ಅಭಿಪ್ರಾಯಪಟ್ಟರು.
ವಿಶೇಷ ಉಪನ್ಯಾಸ ನೀಡಿದ ಮಹಾಗಾಂವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಕರಿಗೂಳೇಶ್ವರ, “ಅಂಬೇಡ್ಕರ್ ಅವರನ್ನು ಕೇವಲ ಜಯಂತಿ ಆಚರಣೆಗೆ ಸೀಮಿತಗೊಳಿಸದೇ, ಅವರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬುದ್ಧ ಮತ್ತು ಬಸವಣ್ಣನವರ ಕನಸುಗಳು ಅಂಬೇಡ್ಕರ್ ಅವರ ಲೇಖನಿಯ ಮೂಲಕ ಸಂವಿಧಾನದಲ್ಲಿ ಪ್ರತಿಬಿಂಬಗೊಂಡಿವೆ” ಎಂದು ಹೇಳಿದರು.
“ಅಂಬೇಡ್ಕರ್ ಅವರ ಭಾವಚಿತ್ರವನ್ನು ತಲೆಯ ಮೇಲೆ ಹೊತ್ತು ಮೆರವಣಿಗೆ ಮಾಡುವುದಕ್ಕಿಂತ, ಅವರ ಜ್ಞಾನ ಮತ್ತು ಚಿಂತನೆಗಳನ್ನು ತಲೆಯೊಳಗೆ ಇಟ್ಟುಕೊಂಡು ನಡೆದಾಗ ಮಾತ್ರ ಅವರು ಕಂಡ ಕನಸಿನ ಭಾರತ ನಿರ್ಮಾಣವಾಗುತ್ತದೆ” ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಬಣ್ಣ ಗುಲಗಂಜಿ ವಹಿಸಿದ್ದರು. ವೇದಿಕೆಯಲ್ಲಿ ಮಾಣಿಕರಾವ್ ಆರ್. ಗುಲಗುಂಜಿ, ರುದ್ರಶೆಟ್ಟಿ ಪಡಶೆಟ್ಟಿ, ಮುರುಗೇಪ್ಪ ಕುಕಡಿ, ಮಹಾರುದ್ರಪ್ಪ ದೇಸಾಯಿ, ತಾಹೇರ್ ಪಟೇಲ್, ಶಾಮರಾವ್ ಮಾದೇಶಿ, ದೇವಿಂದ್ರಪ್ಪ ಹೊಳ್ಕರ್, ಶರಣಪ್ಪ ಎಂ. ಗುಲಗುಂಜಿ, ರುದ್ರಮುನಿ ಬುಗಡಿಕರ್, ಮಾರುತಿ ಬಿ. ಗಂಜಗಿರಿ, ಗೌತಮ ಬೊಮ್ಮನಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರುದ್ರಮುನಿ ರಾಮತೀರ್ಥಕರ್ ಹಾಗೂ ಮಲ್ಲಿಕಾರ್ಜುನ ಗುಲಗುಂಜಿ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಸುಲೇಪೇಟೆ ಪಿ.ಎಸ್.ಐ ಅಮರ ಕುಲಕರ್ಣಿ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.






