ಚಿಂಚೋಳಿ : ಬೈಕ್ಗಳು ಮುಖಾಮುಖಿ ಢಿಕ್ಕಿ: ಓರ್ವ ಮೃತ್ಯು; ಮತ್ತೊಬ್ಬನಿಗೆ ಗಂಭೀರ ಗಾಯ

ಕಲಬುರಗಿ : ಎರಡು ಬೈಕ್ಗಳು ಮುಖಾಮುಖಿ ಢಿಕ್ಕಿಯಾಗಿ 60 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಚಿಂಚೋಳಿ ತಾಲೂಕಿನ ಜಿಲವರ್ಷ ಹಾಗೂ ಶಾದಿಪುರ ಗ್ರಾಮದ ನಡುವಿನ ರಸ್ತೆಯಲ್ಲಿ ರವಿವಾರ ಸಂಜೆ ನಡೆದಿದೆ.
ಶಾದಿಪುರ ಗ್ರಾಮದ ಶೌಕತ್ ಅಲಿ ನಿಜಾಮುದ್ದೀನ್ (60) ಮೃತಪಟ್ಟವರು. ಶಾದಿಪುರದ ಜವಾಹರ ನಗರ ತಾಂಡಾದ ಗೋಪಾಲ ಧರ್ಮು ಚವ್ಹಾಣ ಗಂಭೀರವಾಗಿ ಗಾಯಗೊಂಡಿದ್ದು, ಕುಂಚಾವರಂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶೌಕತ್ ಅಲಿ ಅವರ ಮೂಗಿನಿಂದ ರಕ್ತಸ್ರಾವವಾಗುತ್ತಿದ್ದು, ಉಸಿರಾಟದ ತೊಂದರೆಯೂ ಕಾಣಿಸಿಕೊಂಡಿತ್ತು. ಆದರೆ ಆಸ್ಪತ್ರೆಗೆ ತಲುಪಿದ ಬಳಿಕ ಅವರು ಮೃತಪಟ್ಟಿದ್ದಾರೆ. ಗೋಪಾಲ ಚವ್ಹಾಣ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರ್ಸಿಂಗ್ ವಿದ್ಯಾರ್ಥಿಯ ಮಾನವೀಯತೆಗೆ ಮೆಚ್ಚುಗೆ:
ಶಾದಿಪುರದ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿ ವಿಕ್ರಂ ಕಸ್ತಲಾ ಗಾಯಾಳುಗಳಿಗೆ ಸ್ಥಳದಲ್ಲಿ ತಕ್ಷಣ ಪ್ರಥಮ ಚಿಕಿತ್ಸೆ ನೀಡಿ, ಆಂಬ್ಯುಲೆನ್ಸ್ ಸಮಯಕ್ಕೆ ಬಾರದ ಹಿನ್ನೆಲೆಯಲ್ಲಿ ಆಟೋ ವ್ಯವಸ್ಥೆ ಮಾಡಿ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ ಎಂದು ತಿಳಿದುಬಂದಿದೆ.





