Chincholi | ಅಕ್ರಮ ರಸಗೊಬ್ಬರ ಮಾರಾಟ: ಎರಡು ಅಂಗಡಿಗಳ ಪರವಾನಗಿ ಅಮಾನತು

ಚಿಂಚೋಳಿ: ತಾಲೂಕಿನ ಕುಂಚಾವರಂ ಗ್ರಾಮದಲ್ಲಿ ರಸಗೊಬ್ಬರ ಮಾರಾಟದಲ್ಲಿ ನಿಯಮ ಉಲ್ಲಂಘನೆ ಹಾಗೂ ಅಕ್ರಮ ಎಸಗಿದ ಅಂಗಡಿಗಳ ವಿರುದ್ಧ ಕೃಷಿ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ.
ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ರಾಠೋಡ್ ನಡೆಸಿದ ಪರಿಶೀಲನೆಯಲ್ಲಿ ‘ಶ್ರೀ ಲಕ್ಷ್ಮಿ ವಿನಾಯಕ ಟ್ರೇಡರ್ಸ್’ ಹಾಗೂ ‘ಶ್ರೀ ಲಕ್ಷ್ಮಿ ನರಸಿಂಹ ಅಗ್ರೋ’ ಸಂಸ್ಥೆಗಳು ರಸಗೊಬ್ಬರ ಮಾರಾಟ ಪರವಾನಗಿ ಪತ್ರದಲ್ಲಿ ದಾಸ್ತಾನು ಗೋದಾಮಿನ ವಿವರ ನಮೂದಿಸದಿರುವುದು, ಮಾರಾಟದ ವಿವರಗಳನ್ನು ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸದಿರುವುದು ಹಾಗೂ ಮಳಿಗೆಯಲ್ಲಿ ಲಭ್ಯವಿರುವ ರಸಗೊಬ್ಬರಗಳ ವಿವರ ಮತ್ತು ದರಪಟ್ಟಿಯನ್ನು ಪ್ರದರ್ಶಿಸದೇ ಇರುವುದು ಬೆಳಕಿಗೆ ಬಂದಿದೆ.
ಇದೇ ವೇಳೆ ಈ ಮಳಿಗೆಗಳಲ್ಲಿ ಯುರಿಯಾ ರಸಗೊಬ್ಬರವನ್ನು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ರಸಗೊಬ್ಬರ ನಿಯಂತ್ರಣ ಆದೇಶ-1985ರ ಕಲಂ 31(1)ರಡಿ ನೀಡಿರುವ ಅಧಿಕಾರ ಬಳಸಿಕೊಂಡು, ಎರಡೂ ಅಂಗಡಿಗಳ ಮಾರಾಟ ಪರವಾನಗಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಅಮಾನತುಗೊಳಿಸಲಾಗಿದೆ ಎಂದು ವೀರಶೆಟ್ಟಿ ರಾಠೋಡ್ ತಿಳಿಸಿದ್ದಾರೆ.
ಇದೇ ವೇಳೆ ನಿಯಮ ಉಲ್ಲಂಘಿಸಿದ ಕುಂಚಾವರಂನ ‘ಸಾಯಿನಾಥ್ ಟ್ರೇಡರ್ಸ್’ ಹಾಗೂ ‘ಶ್ರೀ ಗಾಯತ್ರಿ ಟ್ರೇಡರ್ಸ್’ ಮಳಿಗೆಗಳಿಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ.
ತಾಲೂಕಿನ ಎಲ್ಲ ಕೃಷಿ ಪರಿಕರ ಮಾರಾಟಗಾರರು ತಮ್ಮಲ್ಲಿರುವ ಬೀಜ ಹಾಗೂ ರಸಗೊಬ್ಬರದ ದಾಸ್ತಾನು ವಿವರವನ್ನು ರೈತರಿಗೆ ಸ್ಪಷ್ಟವಾಗಿ ಕಾಣುವಂತೆ ಪ್ರದರ್ಶಿಸಬೇಕು. ಕೃಷಿ ಪರಿಕರ ಖರೀದಿಸುವ ಪ್ರತಿಯೊಬ್ಬ ರೈತರಿಗೆ ಸರ್ಕಾರ ನಿಗದಿಪಡಿಸಿರುವ ನಮೂನೆಯಲ್ಲಿ ಕಡ್ಡಾಯವಾಗಿ ರಸೀದಿ ನೀಡಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.






