Chincholi | ಡಾ.ಬಾಬು ಜಗಜೀವನರಾಂ ನಾಮಫಲಕಕ್ಕೆ ಅಪಮಾನ : ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಹೆದ್ದಾರಿ ತಡೆ

ಚಿಂಚೋಳಿ : ತಾಲೂಕಿನ ಚಂದನಕೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟಗಾ ಗ್ರಾಮದ ಹೊರವಲಯದಲ್ಲಿದ್ದ ಹಸಿರು ಕ್ರಾಂತಿಯ ಹರಿಕಾರ ಹಾಗೂ ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ ಭಾವಚಿತ್ರವಿದ್ದ ನಾಮಫಲಕಕ್ಕೆ ಕಿಡಿಗೇಡಿಗಳು ಅಪಮಾನ ಮಾಡಿರುವುದನ್ನು ಖಂಡಿಸಿ ಕರ್ನಾಟಕ ಮಾದರ ಮಹಾಸಭಾ ಹಾಗೂ ಮಾದಿಗ ದಂಡೋರ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಚಿಂಚೋಳಿ–ಕಲಬುರಗಿ ರಾಜ್ಯ ಹೆದ್ದಾರಿ–125ರಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.
ಚಂದನಕೇರಾದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಹೆದ್ದಾರಿಯಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಸುಮಾರು ಎರಡು ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡ ಪರಿಣಾಮ ಎರಡೂ ದಿಕ್ಕುಗಳಲ್ಲಿ ವಾಹನಗಳ ಸಾಲು ನಿರ್ಮಾಣವಾಗಿ ಪ್ರಯಾಣಿಕರು ಪರದಾಡುವಂತಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ಮಾದರ ಮಹಾಸಭಾದ ಜಿಲ್ಲಾಧ್ಯಕ್ಷ ಗೋಪಾಲರಾವ ಕಟ್ಟಿಮನಿ ಮಾತನಾಡಿ, ಡಾ. ಬಾಬು ಜಗಜೀವನರಾಂ ಅವರ ನಾಮಫಲಕಕ್ಕೆ ಅಪಮಾನ ಮಾಡಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಘಟನೆ ಕುರಿತು ಪೊಲೀಸರು ತ್ವರಿತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಚಿಂಚೋಳಿ ಪಟ್ಟಣದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಾದಿಗ ದಂಡೋರ ತಾಲೂಕು ಅಧ್ಯಕ್ಷ ಮಲ್ಲು ಕೋಡಂಬಲ್ ಸೇರಿದಂತೆ ಸಮಾಜದ ಮುಖಂಡರು ಘಟನೆಯನ್ನು ತೀವ್ರವಾಗಿ ಖಂಡಿಸಿ, ಸಮಾಜದ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಹೇಳಿದರು.
ಪ್ರತಿಭಟನೆಯ ಬಳಿಕ ಪ್ರತಿಭಟನಾಕಾರರು ಡಿವೈಎಸ್‌ಪಿ ಸಂಗಮನಾಥ ಹಿರೇಮಠ ಹಾಗೂ ಕಂದಾಯ ನಿರೀಕ್ಷಕ ರವಿ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಅಧಿಕಾರಿಗಳು ಕೋಟಗಾ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಶೀಘ್ರವೇ ಪತ್ತೆಹಚ್ಚಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಸಿಪಿಐ ಕೃಷ್ಣಕುಮಾರ್, ಪಿಎಸ್‌ಐ ಶೀಲಾ, ಚಂದ್ರಕಾಂತ್ ಸುಬೇದಾರ್, ಅಮರ ಕುಲಕರ್ಣಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿರುವಂತೆ ಕ್ರಮ ಕೈಗೊಂಡರು.
ಪ್ರತಿಭಟನೆಯಲ್ಲಿ ದಶರಥ ಕೋಟಗಾ, ಸೋಮಶೇಖರ ಮುತ್ತಂಗಿ, ಮೋಹನ ಐನಾಪುರ, ಮಲ್ಲಿಕಾರ್ಜುನ ಐನಾಪುರ, ಕರ್ನಾಟಕ ಮಾದರ ಮಹಾಸಭಾದ ತಾಲೂಕು ಉಪಾಧ್ಯಕ್ಷ ನರಸಪ್ಪ ಕಿವುಡನೋರ, ಮಂಜುನಾಥ ಕೋಟಗಾ, ಅವಿರೋಧ ಚಂದನಕೇರಾ, ಆಕಾಶ ಬ್ಯಾನರ್ಜಿ, ಶಾಮರಾವ್ ಸೇರಿದಂತೆ ನೂರಾರು ಮಾದಿಗ ಸಮಾಜದ ಮುಖಂಡರು, ಕಾರ್ಯಕರ್ತರು ಹಾಗೂ ಮಹಿಳೆಯರು ಭಾಗವಹಿಸಿದ್ದರು.






