Chincholi | ಮುಂಗಾರು ಬೆಳೆ ವಿಮೆ ನೋಂದಣಿಗೆ ಜು.15 ರಂದು ಕೊನೆಯ ದಿನ

ಚಿಂಚೋಳಿ: 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಕೈಗೊಂಡಿರುವ ರೈತರು ಪ್ರಕೃತಿ ವಿಕೋಪಗಳಿಂದಾಗುವ ಬೆಳೆ ನಷ್ಟಕ್ಕೆ ಆರ್ಥಿಕ ರಕ್ಷಣೆ ಪಡೆಯಲು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್‌ಬಿವೈ) ಅಡಿಯಲ್ಲಿ ಕಡ್ಡಾಯವಾಗಿ ಬೆಳೆ ವಿಮೆ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಚಿಂಚೋಳಿ ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ರಾಠೋಡ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಮಳೆ ಅಭಾವ, ಅತಿವೃಷ್ಟಿ, ಬರ, ಪ್ರವಾಹ, ಭೂಕುಸಿತ ಹಾಗೂ ಬೆಳೆ ಮುಳುಗಡೆಯಂತಹ ನೈಸರ್ಗಿಕ ವಿಕೋಪಗಳಿಂದ ರೈತರು ಬೆಳೆ ಹಾನಿ ಅನುಭವಿಸಿದ ಸಂದರ್ಭದಲ್ಲಿ ಆರ್ಥಿಕ ನೆರವು ದೊರೆಯಲು ಈ ಯೋಜನೆ ಅತ್ಯಂತ ಸಹಕಾರಿಯಾಗಿದೆ. ಆದ್ದರಿಂದ ತಾಲೂಕಿನ ಎಲ್ಲಾ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಉದ್ದು ಬೆಳೆಗೆ ಪ್ರತಿ ಎಕರೆಗೆ 314 ಹಾಗೂ ಹೆಸರಿಗೆ 321 ವಿಮೆ ಪ್ರೀಮಿಯಂ ನಿಗದಿಪಡಿಸಲಾಗಿದ್ದು, ಈ ಎರಡೂ ಬೆಳೆಗಳ ವಿಮೆ ನೋಂದಣಿಗೆ ಜು.15ರಂದು ಕೊನೆಯ ದಿನಾಂಕವಾಗಿದೆ.
ಅದೇ ರೀತಿ ತೊಗರಿಗೆ ಪ್ರತಿ ಎಕರೆಗೆ 466, ಸೋಯಾಬಿನ್‌ಗೆ 378 ಹಾಗೂ ಹತ್ತಿ ಬೆಳೆಗೆ 1,208 ವಿಮೆ ಪ್ರೀಮಿಯಂ ನಿಗದಿಪಡಿಸಲಾಗಿದ್ದು, ಈ ಬೆಳೆಗಳ ನೋಂದಣಿಗೆ ಜು.31ರಂದು ಕೊನೆಯ ದಿನವಾಗಿದೆ.
ಅರ್ಹ ರೈತರು ತಮ್ಮ ಸಮೀಪದ ಗ್ರಾಮ್ ಒನ್, ಕರ್ನಾಟಕ ಒನ್ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ (CSC) ಬೆಳೆ ವಿಮೆ ನೋಂದಣಿ ಮಾಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸುವಂತೆ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






